ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವಿಮಾ ಪರಿಹಾರ ಪಾವತಿಗೆ ಆದೇಶ

Last Updated 12 ಫೆಬ್ರುವರಿ 2021, 15:50 IST
ಅಕ್ಷರ ಗಾತ್ರ

ಹಾವೇರಿ: ವಿಮಾ ಕಂತುಗಳ ಬಾಕಿ ಉಳಿಸಿಕೊಂಡಿರುವ ಕಾರಣ ನೀಡಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ವಿಮಾ ಪರಿಹಾರ ಮೊತ್ತ ಪಾವತಿಸಲು ನಿರಾಕರಿಸಿದ ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌.ಐ.ಸಿ) ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿ ಆದೇಶಿಸಿದೆ.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಿರೇಕೆರೂರು ಡಿಪೋದಲ್ಲಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರೇಕೆರೂರು ತಾಲ್ಲೂಕು ನಿಟ್ಟೂರ ಗ್ರಾಮದ ಶಿವಾನಂದ ಕಬ್ಬೇರ ಎಂಬುವವರು ಸೆಪ್ಟೆಂಬರ್-2018ರಂದು ಅಪಘಾತದಲ್ಲಿ ಮರಣ ಹೊಂದಿದ್ದರು. ಪರಿಹಾರ ಪಡೆಯಲು ಅವರ ಪತ್ನಿ ಲಕ್ಷ್ಮೀ ಶಿವಾನಂದ ಕಬ್ಬೇರ ಅವರು ಅರ್ಜಿ ಸಲ್ಲಿಸಿದಾಗ ಎರಡು ಪ್ರೀಮಿಯಂ ಕಂತುಗಳು ಪಾವತಿಯಾಗಿರುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕರ ವೇದಿಕೆಗೆ ಮೊರೆ ಹೋಗಲಾಗಿತ್ತು.

ಪ್ರಕರಣ ಪರಿಶೀಲನೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ತೀರ್ಪು ನೀಡಿ, ಎರಡು ಪ್ರೀಮಿಯಂ ಕಂತುಗಳನ್ನು ತುಂಬದೇ ಇರುವುದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ವ್ಯವಸ್ಥಾಪಕರು ಹಾಗೂ ಹಿರೇಕೆರೂರು ಡಿಪೊ ಮ್ಯಾನೇಜರ್ ಬೇಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾಲಿಸಿದಾರರ ಮೃತ ಕುಟುಂಬಕ್ಕೆ ವಿಮೆ ಪರಿಹಾರ ಮೊತ್ತ ₹4 ಲಕ್ಷ ಹಾಗೂ ಈ ಮೊತ್ತಕ್ಕೆ ಶೇ 8ರ ಬಡ್ಡಿದರದಂತೆ ಪಾವತಿಸಬೇಕು. ಇದರೊಂದಿಗೆ ಪಿರ್ಯಾದುದಾರರ ಮಾನಸಿಕ ವ್ಯಥೆಗೆ ₹3 ಸಾವಿರ ಹಾಗೂ ದಾವೆ ಖರ್ಚು ₹2 ಸಾವಿರವನ್ನು ಒಂದು ತಿಂಗಳೊಳಗೆ ಪಾವತಿಸಲು ವಿಮೆ ಕಂಪನಿಗೆ ಆದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT