ಸೋಮವಾರ, ಏಪ್ರಿಲ್ 12, 2021
31 °C
ವಿಮಾ ಕಂಪನಿಯಿಂದ ಅನ್ಯಾಯ: ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು

ಗ್ರಾಹಕನಿಗೆ ₹9 ಲಕ್ಷ ನೀಡಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ವಿಮೆ ಮಾಡಿಸುವ ಸಂದರ್ಭದಲ್ಲಿ ಹೇಳಿದ ಹೆಚ್ಚುವರಿ ವಿಮಾ ಮೊತ್ತವನ್ನು ಪಾಲಿಸಿದಾರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಸವಣೂರ ಪಟ್ಟಣದ ನಿವೃತ್ತ ಸರ್ಕಾರಿ ನೌಕರ ವಿಷ್ಣುರಾವ ಭುಜಂಗರಾವ ಕುಂಠೆ ಅವರು ತಮ್ಮ 58ನೇ ವಯಸ್ಸಿನಲ್ಲಿ ‘ಜೀವನ ಸರಳ’ ಪಾಲಿಸಿಯನ್ನು ವಾರ್ಷಿಕ ₹48,080 ಗಳಂತೆ 10 ವರ್ಷಗಳ ಅವಧಿಗೆ ತುಂಬಿದ್ದು, ಪಾಲಿಸಿ ಮೆಚ್ಯುರಿಟಿಯಾದ ನಂತರ ಮೆಚ್ಯುರಿಟಿ ಹಣ ₹1,89,760 ಹಾಗೂ ಬೋನಸ್ ಸೇರಿದಂತೆ ₹10 ಲಕ್ಷ ಸೇರಿ ನೀಡುವುದಾಗಿ ಎಲ್.ಐ.ಸಿ. ಏಜೆಂಟರು ತಿಳಿಸಿದ್ದರು.

ಆದರೆ, ಪಾಲಿಸಿ ಮೆಚ್ಯುರಿಟಿ ನಂತರ ₹2,70,407 ಮಾತ್ರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಪಾಲಿಸಿದಾರರು ₹4,80,400 ಅನ್ನು ವಿಮಾ ಕಂಪನಿಗೆ 10 ವರ್ಷ ವಿಮಾ ಕಂತನ್ನು ತುಂಬಿದ್ದಾರೆ. ಕಾರಣ ತಮಗೆ ಬರಬೇಕಾದ ಪಾಲಿಸಿ ಮೊತ್ತವನ್ನು ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸೆಪ್ಟೆಂಬರ್-2019ರಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಪಾಲಿಸಿದಾರರು ₹4,80,400 ವಿಮಾ ಕಂಪನಿಗೆ ತುಂಬಿ ₹2,70,407 ಪಡೆಯಲು ಒಪ್ಪುತ್ತಿರಲಿಲ್ಲ. ಹಾಗಾಗಿ ವಿಮಾ ಕಂಪನಿ ಹಾಗೂ ಏಜೆಂಟರೂ ಸೇರಿ ವಿಮಾ ಪಾಲಿಸಿ ಮಾಹಿತಿ ಮುಚ್ಚಿಟ್ಟು ಪಾಲಿಸಿ ನೀಡಿರುವುದು ಸ್ಪಷ್ಟವಾಗಿದೆ. ಪಾಲಿಸಿ ಟೇಬಲ್‍ನಂತೆ ಮಾಹಿತಿ ನೀಡಬೇಕಾಗುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ. ಪಾಲಿಸಿ ಟೇಬಲ್‍ ಅನ್ನು ಗ್ರಾಹಕನಿಗೆ ನೀಡದಿರುವುದು ಸ್ಪಷ್ಟವಾಗಿದೆ. ಮೂಲ ಪ್ರಪೋಸಲ್ ಫಾರಂ ಪ್ರಕಾರವೇ ಪಾಲಿಸಿಯನ್ನು ನೀಡಬೇಕು.

ದೂರು ನೀಡಿದ ಗ್ರಾಹಕನು ದಿನಾಂಕ ಡಿಸೆಂಬರ್‌ 23, 2019ರಂದು ಮರಣ ಹೊಂದಿದ ಕಾರಣ ವಾರಸುದಾರರಾದ ಅವರ ಪತ್ನಿ ಮತ್ತು ಮಗ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ವಿಮಾ ಕಂಪನಿಯು ಮೃತರ ಮೊದಲನೆ ವಾರಸುದಾರರಿಗೆ ಬರಬೇಕಾದ ಪಾಲಿಸಿ ಮೊತ್ತ ₹11,89,760ರಲ್ಲಿ ವಿಮಾ ಕಂಪನಿ ಈಗಾಗಲೇ ನೀಡಿದ ₹2,70,470 ಅನ್ನು ವಜಾ ಮಾಡಿಕೊಂಡು ಉಳಿದ ₹9.19 ಲಕ್ಷವನ್ನು ವಾರ್ಷಿಕ 6ರ ಬಡ್ಡಿ ಸಹಿತ ದೂರು ದಾಖಲಿಸಿದ ದಿನದಿಂದ ನೀಡಬೇಕು.

ಏಜೆಂಟನು ಪ್ರಕರಣದ ಖರ್ಚು ಮತ್ತು ಮಾನಸಿಕ ತೊಂದರೆಗಾಗಿ ₹5 ಸಾವಿರ ನೀಡಲು ಹಾಗೂ ಇದಕ್ಕೆ ತಪ್ಪಿದಲ್ಲಿ ಶೇ 12ರಷ್ಟು ವಾರ್ಷಿಕ ಬಡ್ಡಿ ಸಮೇತ ಪಾವತಿಸಲು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.