ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ-ಪ್ರವಾಹ: ತೊಂದರೆಯಾಗದಂತೆ ನಿಗಾವಹಿಸಿ -ಬಿ.ಎಸ್.ಯಡಿಯೂರಪ್ಪ

ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ
Last Updated 23 ಜುಲೈ 2021, 15:10 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸಿ. ದಿನದ 24 ತಾಸು ಎಚ್ಚರದಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ಬೆಂಗಳೂರಿನಿಂದ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಜಿಲ್ಲೆಗಳ ಪ್ರವಾಹ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡರು.

ರಸ್ತೆ, ಸೇತುವೆಗಳು ಹಾಳಾಗಿ ಸಂಪರ್ಕ ಕಡಿತಗೊಂಡರೆ ಜನರ ಓಡಾಟಕ್ಕೆ ತೊಂದರೆಯಾಗದಂತೆ ತಕ್ಷಣ ದುರಸ್ತಿಗೊಳಿಸಬೇಕು. ಸಾವು-ನೋವುಗಳಾಗದಂತೆ ತಡೆಯಬೇಕು ಎಂದು ಸೂಚನೆ ನೀಡಿದರು. ವಿಪತ್ತು ನಿರ್ವಹಣೆ ಅನುದಾನದ ಮಾಹಿತಿ ಪಡೆದ ಅವರು, ವಿಪತ್ತು ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ಅಗತ್ಯಬಿದ್ದರೆ ಅನುದಾನ ನೀಡಲಾಗುವುದು ಎಂದರು.

‘ಜಿಲ್ಲೆಯ ಪ್ರವಾಹ ಹಾಗೂ ಅತಿವೃಷ್ಟಿ ಹಾನಿಯ ಕುರಿತಂತೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ಅತಿವೃಷ್ಟಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದೆ. ಎಲ್ಲ ಅಧಿಕಾರಿಗಳನ್ನು ಕ್ಷೇತ್ರದ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಳೆಯಾಗುತ್ತಿದ್ದು, ವಾಡಿಕೆ 4 ಮೀ.ಮೀ ಬದಲಾಗಿ 60 ಮಿ.ಮೀ. ಮಳೆಯಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲಾಡಳಿತದ ಬಳಿ ₹22 ಕೋಟಿ ಅನುದಾನ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.

ಒಂದು ಎತ್ತು ನೀರಿನಲ್ಲಿ ಕೊಚ್ಚಿಹೋಗಿರುವ ವರದಿಯಾಗಿದೆ. ಮಾಸೂರು-ಶಿಕಾರಿಪುರ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ತಾತ್ಕಾಲಿಕ ಸಂಪರ್ಕ ಕಡಿತಗೊಂಡಿದೆ. ರಸ್ತೆಹಾನಿಯಾಗಿಲ್ಲ, ನಾಲ್ಕು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ನದಿ ಪಾತ್ರದ ಗ್ರಾಮ:ಅತಿವೃಷ್ಟಿ ಹಿನ್ನೆಲೆಯಲ್ಲಿ ನದಿ, ಹಳ್ಳಗಳಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ಕುರಿತಂತೆ ತೀವ್ರ ನಿಗಾವಹಿಸಬೇಕು ಎಲ್ಲಾ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ನದಿ ಪಾತ್ರದ ಗ್ರಾಮಗಳ ಮೇಲೆ ಹೆಚ್ಚಿನ ಗಮನಹರಿಸಬೇಕು. ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನದಿ ಪಾತ್ರ ಹಾಗೂ ತಗ್ಗು ಪ್ರದೇಶದ ಮನೆಗಳನ್ನು ಸ್ಥಳಾಂತರಸಿ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕು. ಜಾನುವಾರಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದರು.

ವಿಡಿಯೋ ಸಂವಾದಲ್ಲಿ ಜಿಲ್ಲಾ ಪಂಚಾಯಿತಿಸಿಇಒ ಮಹಮ್ಮದ ರೋಷನ್, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮೆಳ್ಳಳ್ಳಿ ಇದ್ದರು.

64 ಜನರ ಸ್ಥಳಾಂತರ
ಮತ್ತೂರು, ಅರೆಕಟ್ಟೆ, ಚಿಕ್ಕೇರಿ ಹೊಸಳ್ಳಿ, ಹಿರೇಹುಲ್ಲಾಳ, ಅರೆಕೊಪ್ಪ ಗ್ರಾಮಗಳಲ್ಲಿ ಕೆರೆಗಳಿಂದ ಕೆಲ ಮನೆಗಳಿಗೆ ನೀರು ಹರಿದು ಅಂದಾಜು 64 ಜನರನ್ನು ಸ್ಥಳಾಂತರಿಸಲಾಗಿದೆ. ಮತ್ತೂರು, ಹಿರೇಮೊರಬ, ಮಾಸೂರು, ಮಳಗಿ, ಚಿಕ್ಕೇರೂರು ಗ್ರಾಮದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶಿಗ್ಗಾಂವ ತಾಲೂಕಿನ ಶ್ಯಾಬಳದ ಕ್ಯಾಸನಕೆರೆ, ಚಿಕ್ಕೇರಿ ಹೊಸಳ್ಳಿಯ ದೊಡ್ಡಕೆರೆಗೆ ಕೊಂಚ ಹಾನಿಯಾಗಿದೆ.

ಹಾನಗಲ್‌ನಲ್ಲಿ ಒಂದು ಎತ್ತು ಕೊಚ್ಚಿ ಹೋಗಿದೆ. 161 ಹೆಕ್ಟೇರ್ ತೋಟಗಾರಿಕೆ, 350 ಹೆಕ್ಟೇರ್ ಕೃಷಿ ಜಮೀನಿನಲ್ಲಿ ನೀರು ನಿಂತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT