ಸ್ವಂತ ಉದ್ಯಮದಿಂದ ಸ್ವಾವಲಂಬಿ ಜೀವನ

ಭಾನುವಾರ, ಏಪ್ರಿಲ್ 21, 2019
32 °C
ಕಬ್ಬಿಣ ವಿನ್ಯಾಸಗಳ ಮೂಲಕ ಗಮನ ಸೆಳೆದ ಬಿ.ಎಂ.ಹಿರೇಗೌಡ್ರ,

ಸ್ವಂತ ಉದ್ಯಮದಿಂದ ಸ್ವಾವಲಂಬಿ ಜೀವನ

Published:
Updated:
Prajavani

ರಾಣೆಬೆನ್ನೂರು: ಇಲ್ಲಿನ ವಾಗೀಶ ನಗರದ ಕುಮಾರ ಎಂಜಿನಿಯರಿಂಗ್‌ ವರ್ಕ್ಸ್‌ ಮಾಲೀಕ ಬಿ.ಎಂ.ಹಿರೇಗೌಡ್ರ, ಕಬ್ಬಿಣದ ವಿವಿಧ ವಿನ್ಯಾಸಗಳನ್ನು ರೂಪಿಸುವ ಮೂಲಕ ಸ್ವಯಂ ಉದ್ಯಮವನ್ನು ಆರಂಭಿಸಿದ್ದು, 20 ವರ್ಷಗಳಿಂದ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ನಾಲ್ವರಿಗೆ ಕೆಲಸವನ್ನೂ ನೀಡಿದ್ದಾರೆ.

ಏಳನೇ ತರಗತಿ ಓದಿದ ಅವರು, ಸ್ವಯಂ ಉದ್ಯಮ ಮಾಡಬೇಕು ಎಂಬ ಕನಸು ಹೊಂದಿದ್ದರು. ಅದಕ್ಕಾಗಿ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಕಬ್ಬಿಣದ ವಿನ್ಯಾಸಗಳನ್ನು ತಯಾರಿಸಲು ಪ್ರಾರಂಭಿಸಿದರು.

‘ಈಗ ಎಲ್ಲ ಖರ್ಚು ಕಳೆದು, ಸುಮಾರು ₹15 ರಿಂದ ₹20 ಸಾವಿರ ಆದಾಯ ಪಡೆಯಲು ಸಾಧ್ಯ’ ಎಂದು ಬಿ.ಎಂ.ಹಿರೇಗೌಡ್ರ ತಿಳಿಸಿದರು.

ಈ ಕೆಲಸಕ್ಕೆ ಸಮಯಪ್ರಜ್ಞೆ ಮುಖ್ಯವಾಗಿದೆ. ಅಲ್ಲದೇ, ತಾವೇ ಸ್ವತಃ ಮನೆಗಳಿಗೆ, ದೇವಸ್ಥಾನ, ಗೋದಾಮುಗಳಿಗೆ ಬೇಕಾಗುವ ವೆಂಟಿಲೇಟರ್ಸ್‌, ಶೋಕೇಸ್, ದೇವಸ್ಥಾನದ ಕಮಾನು, ಕೃಷಿ ಉಪಕರಣ, ರೇಲಿಂಗ್ಸ್, ಪೀಠೋಪಕರಣ‌, ಸ್ವಾಗತ ಕಮಾನುಗಳು, ಗ್ರಿಲ್‌ ವರ್ಕ್‌, ರೋಲಿಂಗ್‌ ಶಟರ್ಸ್‌ಗಳನ್ನು ತಯಾರಿಸಿ ಅಳವಡಿಸಿಕೊಡುತ್ತೇವೆ. ಕೃಷಿ ಉಪಕರಣಗಳನ್ನೂ ವಿನ್ಯಾಸಗೊಳಿಸುತ್ತೇವೆ ಎಂದು ತಿಳಿಸಿದರು.

ಕಟ್ಟಡ ಮಾಲೀಕರು, ಗುತ್ತಿಗೆದಾರರು, ಎಂಜಿನಿಯರ್ಸ್‌, ಬಿಲ್ಡರ್‌ಗಳ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಹೀಗಾಗಿ ಹೆಚ್ಚಿನ ಕೆಲಸಗಳ ಗುತ್ತಿಗೆ ಬರುತ್ತವೆ. ಆಧುನಿಕ ಬೇಡಿಕೆಗೆ ತಕ್ಕಂತೆ ಹೊಸ ಹೊಸ ವಿನ್ಯಾಸಗಳನ್ನು ರೂಪಿಸುತ್ತೇವೆ ಎಂದರು.

ನಾನು ಓದಿದ್ದು ಕಡಿಮೆ, ಹೀಗಾಗಿ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಆದರೆ, ಗ್ರಾಹಕರೇ ನೀಡುವ ಮುಂಗಡ ಹಣದಲ್ಲಿ ನನ್ನ ಉದ್ಯಮ ಬೆಳೆಯುತ್ತಾ ಬಂದಿದೆ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿಕೊಡುತ್ತೇವೆ ಎಂದರು.

ವಿದ್ಯಾವಂತರೇ ಇರಲಿ, ಅನಕ್ಷರಸ್ಥರೇ ಆಗಿರಲಿ, ಎಲ್ಲದಕ್ಕೂ ಸರ್ಕಾರವನ್ನು ನಂಬಿ ಕುಳಿತುಕೊಳ್ಳಬಾರದು. ಸರ್ಕಾರಿ ಉದ್ಯೋಗ, ಸರ್ಕಾರಿ ಸೌಲಭ್ಯ, ಸರ್ಕಾರದ ನೆರವು ಎಂದು ಬೇಡುತ್ತಾ ಕೂರುವ ಬದಲು, ಸ್ವಯಂ ಉದ್ಯಮ ಆರಂಭಿಸಬೇಕು. ಆ ಉದ್ಯಮ ಚಿಕ್ಕದಾದರೂ, ಮುಂದೆ ಬೆಳೆದು ನಿಲ್ಲಲು ಅವಕಾಶವಿದೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !