ಶುಕ್ರವಾರ, ಆಗಸ್ಟ್ 23, 2019
22 °C
ಬೈಕ್‌ಗೆ ₹ 5, ಕಾರಿಗೆ ₹ 10 ಶುಲ್ಕ ಸಂಗ್ರಹ * ಜನವಿರೋಧಿ ನೀತಿಗೆ ಸಾರ್ವಜನಿಕರ ಆಕ್ರೋಶ

ಜಿಲ್ಲಾಸ್ಪತ್ರೆಯ ಪಾರ್ಕಿಂಗ್‌ನಲ್ಲೇ ರೋಗಿಗಳು ಸುಸ್ತು!

Published:
Updated:
Prajavani

ಹಾವೇರಿ: ಉಚಿತ ಚಿಕಿತ್ಸೆ ಸಿಗುತ್ತದೆಂದು ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಸ್ಕೂಟರ್ ಏರಿ ಜಿಲ್ಲಾಸ್ಪತ್ರೆಯತ್ತ ಹೊರಟು ಬಿಡಬೇಡಿ. ಆಸ್ಪತ್ರೆಯೊಳಗೆ ಹೋಗುವ ಮುನ್ನ ನೀವು ಸ್ಕೂಟರ್ ನಿಲ್ಲಿಸಲು ಪಾರ್ಕಿಂಗ್ ಶುಲ್ಕ ಕೊಡಲೇಬೇಕು. ಹಣ ಇಲ್ಲದಿದ್ದರೆ, ವಾಹನವನ್ನು ಆಸ್ಪತ್ರೆ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗಬೇಕಾಗುತ್ತದೆ...!‌

ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಸದುದ್ದೇಶದಿಂದ ಪ್ರಾರಂಭಿಸಿರುವ ಜಿಲ್ಲಾಸ್ಪತ್ರೆಯೇ ಸಾರ್ವಜನಿಕರ ಕೈ ಸುಡುತ್ತಿದೆ. ಪಾರ್ಕಿಂಗ್ ಶುಲ್ಕದಿಂದಾಗಿ ಆಸ್ಪತ್ರೆ ಮೆಟ್ಟಿಲು ಹತ್ತುವ ಮೊದಲೇ ಜಿಲ್ಲೆಯ ರೋಗಿಗಳು ಸುಸ್ತಾಗಿ ಬೀಳುತ್ತಿದ್ದಾರೆ. ಶುಲ್ಕ ಸಂಗ್ರಹಿಸುವವನ ಜತೆ ವಾಗ್ವಾದ ನಡೆಸಿ, ಆರೋಗ್ಯ ಮತ್ತಷ್ಟು ಹದಗೆಡಿಸಿಕೊಳ್ಳುತ್ತಿದ್ದಾರೆ.

ಹಾಗಂತ ಈ ವ್ಯವಹಾರ ಅಕ್ರಮವಾಗೇನೂ ನಡೆಯುತ್ತಿಲ್ಲ. ಸುಭಾಷ್ ಬೆಂಗಳೂರು ಎಂಬುವರು ಜಿಲ್ಲಾಡಳಿತದಿಂದ ಗುತ್ತಿಗೆ ಪಡೆದೇ 2015ರಿಂದ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಶುಲ್ಕ ಸಂಗ್ರಹಿಸಿ ಚೀಟಿ ಹರಿಯುವುದಕ್ಕಾಗಿಯೇ ತಲಾ ₹150 ದಿನಗೂಲಿ ಕೊಟ್ಟು ಮೂವರು ನೌಕರರನ್ನು ನೇಮಿಸಿಕೊಂಡಿದ್ದಾರೆ. ಆದರೆ, ‘ಸರ್ಕಾರಿ ಆಸ್ಪತ್ರೆಯಲ್ಲೂ ಈ ರೀತಿ ಶುಲ್ಕ ವಸೂಲಿ ಮಾಡುವುದು ಸರಿಯೇ’ ಎಂಬುದು ರೋಗಿಗಳ ಪ್ರಶ್ನೆ.

‘ಆಸ್ಪತ್ರೆಗೆ ಬರುವವರು ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದರು. ಆಂಬುಲೆನ್ಸ್‌ಗಳು ಬರುವುದಕ್ಕೂ ದಾರಿ ಇರುತ್ತಿರಲಿಲ್ಲ. ಹಿಂದೆ ಮೂರ್ನಾಲ್ಕು ಬೈಕ್‌ಗಳ ಕಳ್ಳತನವೂ ನಡೆದಿತ್ತು. ಹೀಗಾಗಿ, ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸಲು ಜಿಲ್ಲಾಡಳಿತ ಗುತ್ತಿಗೆ ಕೊಟ್ಟಿದೆ. ಆಸ್ಪತ್ರೆ ಆವರಣಕ್ಕೆ ನಿತ್ಯ ಸುಮಾರು ಒಂದೂವರೆ ಸಾವಿರ ವಾಹನಗಳು ಬರುತ್ತವೆ. ಬೈಕ್‌ಗೆ ₹5 ಹಾಗೂ ಕಾರು ಸೇರಿದಂತೆ ಇತರೆ ಲಘು ವಾಹನಗಳಿಗೆ ₹10 ಶುಲ್ಕ ಸಂಗ್ರಹಿಸುತ್ತಿದ್ದೇವೆ. ಅರ್ಧಕ್ಕರ್ಧ ಜನ ಶುಲ್ಕ ಕೊಡುವುದಿಲ್ಲ’ ಎಂದು ಸುಭಾಷ್ ಅವರ ಸಂಬಂಧಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಮಗೆ ₹5 ದೊಡ್ಡದು: ‘ಬರಗಾಲ ಆವರಿಸಿ ಒಂದೊಂದು ರೂಪಾಯಿಯನ್ನೂ ಲೆಕ್ಕ ಹಾಕುವ ಪರಿಸ್ಥಿತಿಯಲ್ಲಿದ್ದೇವೆ. ₹5 ಖರ್ಚಾಗುತ್ತದೆ ಎಂದು ಹೋಟೆಲ್‌ಗಳಲ್ಲಿ ಚಹಾ ಕುಡಿಯುವುದನ್ನೇ ಬಿಟ್ಟಿದ್ದೇವೆ. ಹೀಗಿರುವಾಗ ಬೈಕ್‌ ನಿಲ್ಲಿಸಲು ಹಣ ಕೊಡಬೇಕೆಂದರೆ ಹೇಗೆ? ಇವರ ಹಾವಳಿಯಿಂದ ತಪ್ಪಿಸಿಕೊಳ್ಳಲು ಹೊರಗಡೆ ವಾಹನ ನಿಲ್ಲಿಸಿದರೆ ಅಲ್ಲಿ ಪೊಲೀಸರ ಕಾಟ. ನಮಗೆ ₹5 ತುಂಬ ದೊಡ್ಡದು. ನಾವೆಲ್ಲ ವಾರದಲ್ಲಿ 2–3 ಬಾರಿ ಆಸ್ಪತ್ರೆಗೆ ಬಂದು ಹೋಗುವವರು. ತಿಂಗಳಿಗೆ ನೂರಾರು ರೂಪಾಯಿಯನ್ನು ಪಾರ್ಕಿಂಗ್‌ಗೇ ಕೊಡುವಷ್ಟು ದೊಡ್ಡ ಜನರಲ್ಲ’ ಎಂದು ಅಳಲು ತೋಡಿಕೊಂಡರು ಚಿಕ್ಕಲಿಂಗದಹಳ್ಳಿಯ ಗುಡ್ಡಪ್ಪ.

‘ಶುಲ್ಕ ಕಟ್ಟಿಸಿಕೊಳ್ಳುವುದಾದರೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಆದರೆ, ಅಂತಹ ಯಾವುದೇ ಕ್ರಮಗಳನ್ನು ಮಾಡಿಲ್ಲ. ನಾವು ಮೊದಲು ನಿಲ್ಲಿಸುತ್ತಿದ್ದ ಜಾಗದಲ್ಲೇ ಈಗಲೂ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅದಕ್ಕೂ ಹಣ ಸಂಗ್ರಹಿಸುತ್ತಿದ್ದಾರೆ. ರೋಗಿಗಳ ಮೇಲೆ ಜಿಲ್ಲಾಡಳಿತಕ್ಕೆ ಕಾಳಜಿ ಇದ್ದರೆ, ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನಗಳ ನಿರ್ವಹಣೆಗೆ ನೌಕರರನ್ನು ನೇಮಿಸಬೇಕು’ ಎಂದು ಹೀಲದಹಳ್ಳಿಯ ನವೀನ್ ಹರವಿ ಮನವಿ ಮಾಡಿದರು.

 

ಕಾನೂನುಬದ್ಧ, ಜನರಿಗೂ ಗೊತ್ತಿದೆ

‘ನಿಯಮದ ಪ್ರಕಾರವೇ ಟೆಂಡರ್‌ನಲ್ಲಿ ಪಾಲ್ಗೊಂಡು ವ್ಯವಹಾರ ನಡೆಸಲಾಗುತ್ತಿದೆ. ಪ್ರತಿ ವರ್ಷ ₹30 ಸಾವಿರ ಕೊಟ್ಟು ಗುತ್ತಿಗೆ ನವೀಕರಣ ಮಾಡಿಸುತ್ತಿದ್ದೇನೆ. ಈಗ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಚೀಟಿ ಕೊಟ್ಟು ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಇಲ್ಲಿಯವರೆಗೆ ನಮ್ಮಿಂದ ಯಾರೊಬ್ಬರಿಗೂ ತೊಂದರೆ ಆಗಿಲ್ಲ. ಹಣ ಇಲ್ಲದಿದ್ದರೆ, ಶುಲ್ಕ ಪಡೆಯದೇ ಬಿಟ್ಟು ಕಳುಹಿಸುತ್ತಿದ್ದೇವೆ’ ಎಂದು ಸುಭಾಷ್ ಬೆಂಗಳೂರ ಹೇಳಿದರು.

ನಿಮಿಷದ ನಿಲುಗಡೆಗೂ ಹಣ

‘ಔಷಧದ ಮಳಿಗೆ ಬಳಿ ಬ್ಯಾಗ್ ಬಿಟ್ಟು ಹೋಗಿದ್ದೆ. ಅದನ್ನು ತೆಗೆದುಕೊಂಡು ಹೋಗಲು ವಾಪಸ್ ಬಂದು ಒಂದೇ ಒಂದು ನಿಮಿಷ ಬೈಕ್ ನಿಲ್ಲಿಸಿದೆ. ಅದಕ್ಕೂ ₹5 ಶುಲ್ಕ ಕೊಡಬೇಕಾಯಿತು. ಎಷ್ಟೇ ಮನವಿ ಮಾಡಿದರೂ ಹಣ ಸಂಗ್ರಹಿಸುವವನು ಮಾತು ಕೇಳುವುದಿಲ್ಲ. ಕೊನೆಗೆ ದುಡ್ಡು ಕೊಟ್ಟೇ ಹೊರಟಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು ಕನಕಾಪುರದ ಷರೀಫ್ ನದಾಫ್.

***

ನನ್ನ ಅವಧಿಯಲ್ಲಿ ಈ ಟೆಂಡರ್ ಆಗಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಿರುವ ವಿಚಾರವೂ ಗೊತ್ತಿರಲಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ
ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ

Post Comments (+)