ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ–ಸಮೀಕ್ಷೆಗೆ ಸಂಭಾವನೆ ನೀಡಿ’

ಜಿಲ್ಲಾಡಳಿತ ಭವನದ ಎದುರು ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ
Last Updated 6 ಏಪ್ರಿಲ್ 2021, 15:38 IST
ಅಕ್ಷರ ಗಾತ್ರ

ಹಾವೇರಿ: ‘ಇ–ಸಮೀಕ್ಷೆ ಮಾಡಲುಮೊಬೈಲ್, ಡೇಟಾ ಮತ್ತು ಅದಕ್ಕೆ ಸೂಕ್ತ ಸಂಭಾವನೆ ನೀಡಲು ಆಗ್ರಹಿಸಿ,ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಮಂಗಳವಾರ ದೇವಗಿರಿಯ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಯಿತು.

ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಮೊಬೈಲ್ ಮತ್ತು ಡೇಟಾ ನೀಡದೆ ಇಲಾಖೆ ಒತ್ತಾಯ ಪೂರ್ವಕವಾಗಿ ಸಮೀಕ್ಷೆ ಮಾಡಿಸಲು ಮುಂದಾಗಿದೆ. ಆಶಾ ಬಳಿ ಮೊಬೈಲ್ ಇಲ್ಲವೆಂದರೆ ಹೊಸ ಮೊಬೈಲ್‌ ಅನ್ನು ನಾಳೆಯೊಳಗೆ ಖರೀದಿ ಮಾಡಬೇಕು. ಇಲ್ಲದಿದ್ದರೆ ಕೆಲಸ ಬಿಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಆಶಾ ಕಾರ್ಯಕರ್ತೆ ಸಂಗ್ರಹಿಸುತ್ತಾಳೆ. ಆದರೆ ಇನ್ನಿತರೆ ‘ಆರ್ಥಿಕ ಮಾಹಿತಿ’ ಕೇಳಿದಾಗ ಜನರಿಂದ ಪ್ರತಿರೋಧ ಎದುರಿಸಿರುವ ಘಟನೆಗಳು ನಡೆದಿವೆ. ಇಂತಹ ಆರ್ಥಿಕ ವಿಷಯಗಳನ್ನು ಸಮೀಕ್ಷೆಯಲ್ಲಿ ಕೈಬಿಡಬೇಕು. ಯಾರಿಗೆ ಮೊಬೈಲ್ ಬಳಕೆ ಮಾಡಲು ಬರುವುದಿಲ್ಲವೋ ಅಂಥವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಹಾವೇರಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸಿದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.ಕೊರೊನಾ ಪರಿಸ್ಥಿತಿಯಲ್ಲಿ ಹಲವಾರು ಕುಟುಂಬಗಳು ಸಂಕಷ್ಟದಲ್ಲಿವೆ. ಮೊಬೈಲ್ ಖರೀದಿಸಲು ಬೇಕಾಗುವ ಸಾವಿರಾರು ರೂಪಾಯಿಗಳನ್ನು ಎಲ್ಲಿಂದ ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮನವಿ ಸ್ವೀಕರಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಮೊಬೈಲ್ ಕೊಟ್ಟಿರುವುದಿಲ್ಲ, ಹಾಗಾಗಿ ಮೊಬೈಲ್ ಆಧಾರಿತ ಸರ್ವೆಗಳನ್ನು ಮಾಡಿ ಎಂದು ಹೇಳಲು ಆಗುವುದಿಲ್ಲ. ಈ ಸಮೀಕ್ಷೆಯಲ್ಲಿ ಮ್ಯಾನುವಲ್‌ನಲ್ಲಿ ಮಾಡುವ ಮೂಲಕ ಸಹಕರಿಸಬೇಕು ಎಂದರು. ಇತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ, ಜಿಲ್ಲಾ ಸಮಿತಿಯ ಸದಸ್ಯರಾದ ರೂಪ ಮಾನೆ, ಲಕ್ಷ್ಮಿ ಕಳಸೂರ, ವನಜಾಕ್ಷಿ ಚಕ್ರಸಾಲಿ, ನೀಲಾ ಕಳ್ಳಿಮನಿ, ಪುಷ್ಪ ಮಡ್ಲೂರ ಮಠ, ಗಂಗಮ್ಮ ಹೂಗಾರ, ಗೀತಾ ಮಡಿವಾಳರ, ಅಕ್ಷತಾ ಬಾರ್ಕಿ, ವಿನೋದ ಹೊಂಡದ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT