ಭಾನುವಾರ, ನವೆಂಬರ್ 29, 2020
23 °C
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ: ಡಾ.ಮಹಾದೇವ ಚಟ್ಟಿ

ಕೃಷಿ ಉತ್ಪನ್ನ ದ್ವಿಗುಣಕ್ಕೆ ಕ್ರಿಯಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರೈತರ ಉತ್ಪಾದನೆ ದ್ವಿಗುಣಗೊಳಿಸುವುದು ಹಾಗೂ ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕೃಷಿ ಸಂಶೋಧನೆ ತಾಂತ್ರಿಕತೆಯ ಬಳಕೆಯ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲು ಕೃಷಿ ಇಲಾಖೆಗಳು ಹಾಗೂ ರೈತರ ಸಹಕಾರ ಅವಶ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚಟ್ಟಿ ಹೇಳಿದರು.

ಹನುಮನಮಟ್ಟಿಯ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ 43ನೇ ವೈಜ್ಞಾನಿಕ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿಯ ಹವಾಮಾನ, ಮಣ್ಣಿನಗುಣ, ಪ್ರದೇಶಕ್ಕನುಗುಣವಾಗಿ ನವೀನ ಕೃಷಿ ತಾಂತ್ರಿಕತೆ ಮೂಲಕ ಕೃಷಿ ಉತ್ಪನ್ನಗಳ ಹೆಚ್ಚಳ, ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

₹10 ಕೋಟಿ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರವನ್ನು ಪೂರ್ಣ ಪ್ರಮಾಣದ ಕೃಷಿ ವಿಜ್ಞಾನ ಕೇಂದ್ರವಾಗಿ ಹಂತ– ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಕೃಷಿ ಪದವಿ ಹಾಗೂ ಡಿಪ್ಲೊಮಾ ಕೋರ್ಸ್‍ಗಳನ್ನು ಆರಂಭಿಸಲಾಗಿದೆ. ಕಾಲೇಜು ಕಟ್ಟಡ ನಿರ್ಮಾಣ ಹಾಗೂ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ನರ್ಬಾಡ್‍ನಿಂದ ₹10 ಕೋಟಿ ಮಂಜೂರಾಗಿದೆ. ಶೀಘ್ರವೇ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು. 

ವಿಡಿಯೊ ಸಂವಾದ: ಕೆ.ವಿ.ಕೆ. ನೋಡಲ್ ಅಧಿಕಾರಿ ಶ್ರೀನಿವಾಸ ರೆಡ್ಡಿ ವಿಡಿಯೊ ಸಂವಾದದ ಮೂಲಕ ಮಾತನಾಡಿ, ಒಣ ಬೇಸಾಯ ಪ್ರದೇಶದಲ್ಲಿ ತೋಟಗಾರಿಕಾ ಚಟುವಟಿಕೆಯ ವಿಸ್ತರಣೆ, ಮಣ್ಣು ಪರೀಕ್ಷೆಗೆ ಆದ್ಯತೆ, ಕೃಷಿ ವಿ.ವಿ.ಯ ತಾಂತ್ರಿಕ ಶಿಫಾರಸುಗಳ ಅನುಷ್ಠಾನಕ್ಕೆ ಗ್ರಾಮ ಕ್ಷೇತ್ರ ಆಯ್ಕೆ ಮಾಡಿ ಪ್ರಾಯೋಗಿಕವಾಗಿ ರೈತರಿಗೆ ಬದಲಾವಣೆಗಳ ಕುರಿತಂತೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮ, ಹೊಸ ತಳಿಗಳ ಪರಿಚಯ ಕುರಿತಂತೆ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಬೆಂಗಳೂರಿನ ಅಟಾರಾ ನಿರ್ದೇಶಕ ಡಾ.ವೆಂಕಟಸುಬ್ರಮಣ್ಯ ಅವರು ಮಾತನಾಡಿದರು. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಿ.ಅಶೋಕ ಕೇಂದ್ರದ ಚಟುವಟಿಕೆಗಳ ಪೂರ್ಣ ಮಾಹಿತಿ ನೀಡಿದರು.

ಸಭೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶಬಾಬು, ಕೆ.ವಿ.ಕೆ. ಹನುಮನಮಟ್ಟಿಯ ಡೀನ್ ಡಾ.ಬಸವರಾಜಪ್ಪ, ಕೃಷಿ ಜಂಟಿ ನಿರ್ದೇಶಕ ಡಾ.ಮಂಜುನಾಥ್, ಮೀನುಗಾರಿಕೆ, ಅರಣ್ಯ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಇದ್ದರು. 

ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಕಟಿಸಿರುವ ವಿವಿಧ ಪ್ರಕಟಣೆಗಳನ್ನು ಕುಲಪತಿಗಳು ಬಿಡುಗಡೆಗೊಳಿಸಿದರು. ಸಾವಯವ ಕೃಷಿ ಪ್ರದರ್ಶನಗಳನ್ನು ವೀಕ್ಷಿಸಿದರು. ವಿಜ್ಞಾನ ಕೇಂದ್ರದ ಆವರಣದಲ್ಲಿ ಸಸಿನೆಟ್ಟು ನೀರುಣಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.