ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆ ಎಂದರೆ ನೆನಪುಗಳ ಮೆರವಣಿಗೆ

‘ಲೇಖಕರೊಂದಿಗೆ ಭೇಟಿ’ ಕಾರ್ಯಕ್ರಮದಲ್ಲಿ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿಮತ
Last Updated 14 ಮೇ 2022, 15:42 IST
ಅಕ್ಷರ ಗಾತ್ರ

ಹಾವೇರಿ:‘ಒಂದೂವರೆ ವರ್ಷದವನಿರುವಾಗ ನನ್ನಪ್ಪ ತೀರಿಕೊಂಡ, ಅವ್ವ ಇದ್ದ ಮನೆಯನ್ನು ಮಾರಿ, ಅಪ್ಪನ ಹೆಣವನ್ನು ಸಾಗಿಸಿದರು. ಇದು ಈಗಲೂ ನನ್ನನ್ನು ಕಾಡುವ ಘಟನೆ. ಕಪ್ಪು ಬಸೆ ತೊಳೆದೆ, ಬೀದಿ ದೀಪದ ಕೆಳಗೆ ಓದಿ ಶಿಕ್ಷಣ ಮುಗಿಸಿದೆ. ಬದುಕು ಒಂದು ಸಂತಿ ಜಾತ್ರಿ ಇದ್ದಂತೆ...’

ಹೀಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡವರು ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ.

ಹಾವೇರಿ ನಗರದ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಶನಿವಾರ ಸಾಹಿತ್ಯ ಅಕಾಡೆಮಿಯ ‘ಲೇಖಕರೊಂದಿಗೆ ಭೇಟಿ’ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ನೆನಪು ಮತ್ತು ಸಾಹಿತ್ಯ ರಚನೆ ಕುರಿತು ಮಾತನಾಡಿದರು.

‘ಬರವಣಿಗೆ ಅಂದರೆ ಲೇಖಕನೊಬ್ಬನ ನೆನಪುಗಳ ಮೆರವಣಿಗೆ ಇದ್ದಂತೆ, ಸಾಹಿತಿ ಇದ್ದಾಗ ಮಾತನಾಡುತ್ತಾರೆ, ಅವರು ಇಲ್ಲದಾಗ ಆತನ ಸಾಹಿತ್ಯ ಮಾತನಾಡುತ್ತದೆ. ಸಾಹಿತ್ಯ ಲೋಕವೇ ವಿಚಿತ್ರ, ಪ್ರಶಸ್ತಿಗಳು ಬರಬೇಕಾದವರಿಗೆ ಬರುವುದಿಲ್ಲ. ಹಾಗೆ ನೋಡಿದರೆ ಡಿ.ವಿ. ಗುಂಡಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಾಗಿತ್ತು. ಆದರೆ ಬರಲಿಲ್ಲ. ಇದು ತಪ್ಪೋ ಸರಿಯೊ ಗೊತ್ತಿಲ್ಲ. ಬಾರದಿರುವುದಂತೂ ನಿಜ’ಎಂದರು.

‘ಗೋಕಾಕರು ನಮ್ಮೆಲ್ಲರ ಸಾಹಿತ್ಯದ ಗುರುಗಳು.ನಾನು ಕಲಿತ ಬಾಸಲ್ ಮಿಶನ್ ಶಾಲೆ ನನ್ನನ್ನು ಬೆಳೆಸಿತು. ವರದರಾಜ ಹುಯಿಲುಗೋಳರು ನಮಗೆಲ್ಲ ಸಾಹಿತ್ಯದ ಆರಂಭಿಕ ಮಾರ್ಗದರ್ಶಿಗಳು. ನನ್ನಲ್ಲಿ ಶೆಲ್ಲಿ, ಕೀಟ್ಸ್, ವರ್ಡ್ಸ್‌ವರ್ತ್‌ ಅವರನ್ನು ಬಿತ್ತಿದರು ಎಂದು ತಮ್ಮ ಆರಂಭಿಕ ಬರವಣಿಗೆಯ ಬಗ್ಗೆ ಪಟ್ಟಣಶೆಟ್ಟಿ ಅವರು ನೆನಪಿಸಿಕೊಂಡರು.

‘ಆರು ರೂಪಾಯಿಯ ಸ್ಕಾಲರ್‌ಶಿಪ್‌ ನನ್ನ ಓದಿಗೆ ಊರುಗೋಲಾಯಿತು. ಅವ್ವ ಗಿರಿಜವ್ವ ಹಟ ಮಾಡಿ ಹಳ್ಳಿ ಬಿಟ್ಟು ಧಾರವಾಡಕ್ಕೆ ಕರೆತಂದು ಓದಿಸಿದರು. ನನಗೆ ಪ್ರತಿ ದಿನ ಹೊಸ ದಿನ. ವಿಚಿತ್ರ ಘಟನೆಗಳು ಜರುಗಿದವು. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ್ದರಿಂದಲೇ ಎರಡು ವರ್ಷ ನೌಕರಿ ಸಿಗಲಿಲ್ಲ. ಚಂಪಾ ಮಧ್ಯಸ್ಥಿಕೆ ವಹಿಸಿ ಪಾವಟೆ ಮತ್ತು ಗುದ್ಲೆಪ್ಪ ಹಳ್ಳಿಕೇರಿ ಅವರನ್ನು ಭೇಟಿಯಾಗಿ ನೌಕರಿ ಕೊಡಿಸಿದರು ಎಂದು ನೆನೆದರು.

‘ನಿನ್ನ ಮರೆಯೋ ಮಾತು ಬಿಡು’ಎಂಬ ಕವಿತೆ ನನ್ನ ಪ್ರಸಿದ್ಧಿಗೆ ತಂದಿತು. ಅದು ಒಂದು ಹುಡುಗಿಯ ಮೇಲೆ ಬರೆದ ವಿರಹದ ಕವಿತೆ. ಅವಳೇ ಕಳೆದ ವಾರ ಮನೆಗೆ ಬಂದು ತನ್ನ ಮೊಮ್ಮಗಳ ಲಗ್ನ ಪತ್ರಿಕೆ ತಂದು ಕೊಟ್ಟು ಹೋದಳು’ಎಂದು ಹೇಳಿದಾಗ ಸಭೆಯಲ್ಲಿ ನಗೆಗಡಲು ಉಕ್ಕಿತು.

‘ನೋವು–ಪ್ರೀತಿ ನನ್ನ ಕವಿತೆಯ ಪ್ರತಿಮೆಗಳು’

ನೋವು, ಬಡತನ, ಪ್ರೀತಿ ಇವೇ ನನ್ನ ಕವಿತೆಯ ಪ್ರತಿಮೆಗಳು. ಬೇಂದ್ರೆ ನಂತರ ಧಾರವಾಡದ ಭಾಷೆಯನ್ನು ಗದ್ಯದಲ್ಲಿ ಬಳಸಿದವ ನಾನು.‘ಚಾ ಜೋಡಿ ಚೂಡಾದಾಂಗ’ಈ ಅಂಕಣ ನನ್ನನ್ನು ಪ್ರಸಿದ್ಧಿಗೆ ತಂದಿತು. ಅವ್ವ ಪ್ರತಿಯೊಬ್ಬನ ಜೀವನದಲ್ಲಿ ಮುಖ್ಯ, ಅವಳ ನಂತರ ಹೆಂಡತಿ ಆ ಸ್ಥಾನ ತುಂಬುತ್ತಾಳೆ. ಹೆಣ್ಣು ಇಲ್ಲದಿದ್ದರೆ ಜಗತ್ತು ಬರಡಾಗುತಿತ್ತು ಎಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಕವಿತೆಯ ಪ್ರತಿಯೊಂದು ಸಾಲು ಮನದಲ್ಲಿ ನಾಟಬೇಕು, ಕವಿಯ ಬೇಗುದಿ ಓದುಗನದಾಗಬೇಕು.‘ಆವೋ ಪ್ಯಾರೆ ಸಾಥ್‌ ಹಮಾರೆ’ಎಂಬ ನನ್ನ ಹಿಂದಿ ಹಾಡು ಇಡೀ ದೇಶದ ತುಂಬ ಗುನುಗುನುತ್ತಿದೆ. ಇದು ಜೀವ ವಿಮಾ ನಿಗಮದ ಧ್ಯೇಯ ಗೀತೆಯಾಗಿದೆ ಎಂಬುದೇ ನನ್ನ ಗರ್ವದ ಮಾತು ಎಂದರು.

ಸಾಹಿತ್ಯ ಆಕಾಡೆಮಿಯ ಸಂಚಾಲಕ ಸದಸ್ಯ ಡಾ.ಸರಜೂ ಕಾಟ್ಕರ್ ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಹೇಮಾ ಪಟ್ಟಣಶೆಟ್ಟಿ, ಶಶಿಕಲಾ ಅಕ್ಕಿ, ಸಿ.ಎಸ್. ಮರಳಿಹಳ್ಳಿ, ಲಿಂಗರಾಜ ಸೊಟ್ಟಪ್ಪನವರ, ದೇವು ಪತ್ತಾರ, ಪ್ರವೀಣ ಮೈಸೂರ, ಪರಿಮಳಾ ಜೈನ್ ಪಾಲ್ಗೊಂಡಿದ್ದರು. ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸದಸ್ಯ ಸತೀಶ ಕುಲಕರ್ಣಿ ಸ್ವಾಗತಿಸಿದರು. ಎಸ್.ಆರ್.ಹಿರೇಮಠ ನಡೆಸಿದರು. ಕರಿಯಪ್ಪ ಹಂಚಿನಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT