ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | 9 ವರ್ಷಗಳಲ್ಲಿ 275 ‘ಪೋಕ್ಸೊ’ ಪ್ರಕರಣ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಜಿಲ್ಲೆಯಲ್ಲಿ 38 ಪ್ರಕರಣಗಳಲ್ಲಿ ಶಿಕ್ಷೆ
Last Updated 22 ಮೇ 2020, 3:02 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ 9 ವರ್ಷಗಳಲ್ಲಿ (2012ರಿಂದ 2020 ಫೆಬ್ರುವರಿವರೆಗೆ) ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೊ) ಬರೋಬ್ಬರಿ 275 ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 38 ಪ್ರಕರಣಗಳಲ್ಲಿ ಶಿಕ್ಷೆ ಜಾರಿಯಾಗಿದೆ.

18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಹಲ್ಲೆ, ಕಿರುಕುಳ ಸೇರಿದಂತೆ ವಿವಿಧ ರೀತಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು, ಕಾಮುಕರು ಮತ್ತು ವಿಕೃತ ಮನಸ್ಸಿನ ವ್ಯಕ್ತಿಗಳು ಕೃತ್ಯಗಳನ್ನು ಎಸಗಿದ್ದಾರೆ.

15ರಿಂದ 18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲೆ ಇಂಥ ಕೃತ್ಯಗಳು ಹೆಚ್ಚು ನಡೆದಿರುವುದನ್ನು ಅಂಕಿ ಅಂಶಗಳು ಸಾಬೀತುಪಡಿಸುತ್ತವೆ. ಲೈಂಗಿಕ ದೌರ್ಜನ್ಯ ಕೃತ್ಯಗಳು ಪರಿಚಿತರು, ನೆರೆಹೊರೆಯುವರು ಮತ್ತು ಕುಟುಂಬದ ಸದಸ್ಯರಿಂದಲೇ ಹೆಚ್ಚಾಗಿ ನಡೆದಿರುವುದು ಆಘಾತಕಾರಿ ವಿಷಯ.

2 ತಿಂಗಳಲ್ಲಿ 6 ಪ್ರಕರಣ!
ಒಟ್ಟು 275 ಪ್ರಕರಣಗಳ ಪೈಕಿ 153 ಪ್ರಕರಣಗಳಲ್ಲಿಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆಗೊಂಡಿದ್ದಾರೆ. 84 ಪ್ರಕರಣಗಳು ನ್ಯಾಯಾಲಯದ ವಿಚಾರಣಾ ಹಂತದಲ್ಲಿವೆ. 2016ರಲ್ಲಿ 54 ಪ್ರಕರಣಗಳು, 2017 ಮತ್ತು 2018ರಲ್ಲಿ ತಲಾ 48 ಪ್ರಕರಣಗಳು ಹಾಗೂ 2019ರಲ್ಲಿ 40 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ 6 ಪೋಕ್ಸೊ ಪ್ರಕರಣಗಳು ಬೆಳಕಿಗೆ ಬಂದಿವೆ.

ಆಟವಾಡುವ ಬಾಲಕಿ ಎಳೆದೊಯ್ದಿದ್ದ ಕಾಮುಕ:2018ರಲ್ಲಿ ಬ್ಯಾಡಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಕ್ಕಳೊಂದಿಗೆ ಸಂಜೆ ವೇಳೆ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಅದೇ ಗ್ರಾಮದ ಕಾಮುಕನೊಬ್ಬ ಎಳೆದೊಯ್ದು, ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಐದೇ ದಿನಗಳಲ್ಲೇ ತನಿಖೆ ಪೂರ್ಣಗೊಳಿಸಿದ ಬ್ಯಾಡಗಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು 62 ದಿನಗಳಲ್ಲೇ ಅಪರಾಧಿಗೆ 28 ವರ್ಷಗಳ ಜೈಲು ಶಿಕ್ಷೆ ಜಾರಿಯಾಯಿತು ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ.

ಪೋಕ್ಸೊ ಕಾಯ್ದೆಗೆ ತಿದ್ದುಪಡಿ:ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಗಲ್ಲು ಶಿಕ್ಷೆ ವಿಧಿಸುವುದು ಸೇರಿದಂತೆ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಪ್ರಬಲ ನಿಯಮಗಳಿಂದ ಕಾಯ್ದೆಗೆ ಇನ್ನಷ್ಟು ಬಲ ಬಂದಿದ್ದು, ಸಂಕಷ್ಟದಲ್ಲಿರುವ ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಘನತೆಯನ್ನು ಕಾಪಾಡಲು ಅನುಕೂಲವಾಗಿದೆ ಎನ್ನುತ್ತಾರೆ ಮಕ್ಕಳು ಹಕ್ಕು ಹೋರಾಟಗಾರರು.

ದುಷ್ಪರಿಣಾಮಗಳು:‘ಲೈಂಗಿಕ ದೌರ್ಜನ್ಯ ಕೃತ್ಯಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಂತ್ರಸ್ತ ಮಕ್ಕಳು ಸದಾ ಭಯ, ಆತಂಕ, ಒತ್ತಡ, ಹಿಂಸೆಯನ್ನು ಅನುಭವಿಸುತ್ತಾರೆ. ಜನರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಖಿನ್ನತೆಗೆ ಒಳಗಾಗಿ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಗಳಾಗುತ್ತವೆ. 15ರಿಂದ 18 ವರ್ಷದೊಳಗಿನ ಹೆಣ್ಣುಮಕ್ಕಳು ಕೈಗೊಳ್ಳುವ ದುಡುಕಿನ ನಿರ್ಧಾರಗಳು ಕೂಡ ಅವರ ಜೀವನವನ್ನೇ ಹಾಳು ಮಾಡುತ್ತವೆ’ ಎನ್ನುತ್ತಾರೆ ಮನೋರೋಗ ತಜ್ಞೆ ಡಾ.ಪಿ.ಲೀಲಾ.

‘ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಯಾರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಬೇಕು. 13 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಲೈಂಗಿಕ ಶಿಕ್ಷಣ ನೀಡಬೇಕು. ತೊಂದರೆಗೊಳಗಾದಾಗ ಏನು ಮಾಡಬೇಕು ಎಂಬುದನ್ನೂ ಪೋಷಕರು ಹೇಳಿ ಕೊಡಬೇಕು. ಒಟ್ಟಿನಲ್ಲಿ ಮಕ್ಕಳ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿ, ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂಬುದು ಡಾ.ಲೀಲಾ ಅವರ ಸಲಹೆ.

ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ

ಕಳೆದು ಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಓಡಿ ಹೋದ ಮಕ್ಕಳು, ವೈದ್ಯಕೀಯ ನೆರವು ಅಗತ್ಯವಿರುವ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಎಲ್ಲ ಮಕ್ಕಳ ನೆರವಿಗಾಗಿ ‘ಮಕ್ಕಳ ಸಹಾಯವಾಣಿ– 1098’ಗೆ ಕರೆ ಮಾಡಬಹುದು ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಪ್ರಭಾವತಿ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಕ್ಕಳ ಚಿಕಿತ್ಸೆಗೆ ಮಕ್ಕಳ ರಕ್ಷಣಾ ಘಟಕದಿಂದ ₹5 ಸಾವಿರ, ನಂತರ ಮೂರು ದಿನಕ್ಕಿಂತ ಹೆಚ್ಚು ದಿನ ಆಸ್ಪತ್ರೆಗಳಲ್ಲಿ ಉಳಿದರೆ ₹ 5 ಸಾವಿರ ನೆರವು ನೀಡಲಾಗುತ್ತದೆ. ವೈದ್ಯರ ಶಿಫಾರಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ₹ 15 ಸಾವಿರ ಕೊಡಲು ಅವಕಾಶವಿದೆ. ನಂತರ, ನ್ಯಾಯಾಲಯ ಆದೇಶದ ಮೇರೆಗೆ ₹ 3 ಲಕ್ಷದವರೆಗೂ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT