ಮಂಗಳವಾರ, ಡಿಸೆಂಬರ್ 7, 2021
24 °C
ಕೇಂದ್ರ ಸಾಮಾನ್ಯ ವೀಕ್ಷಕರಿಂದ ಮಾರನಬೀಡ ಹಿರಿಯ ನಾಗರಿಕರ ಮನೆಗೆ ಭೇಟಿ

ಅಂಗವಿಕಲರಿಂದ ಅಂಚೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮನೆಯಿಂದ ಅಂಚೆ ಮತದಾನ ಮಾಡಲು ಒಪ್ಪಿಗೆ ನೀಡಿದ್ದ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ‘ಅಂಚೆ ಮತದಾನ’ ಸೋಮವಾರ ಸುಗಮವಾಗಿ ನಡೆಯಿತು. 

ಹಾನಗಲ್ ವಿಧಾನಸಭಾ ಕ್ಷೇತ್ರದ 450 ಹಿರಿಯ ನಾಗರಿಕರು ಮತ್ತು 28 ಅಂಗವಿಕಲರು ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿದ್ದರು. ಈ ಪೈಕಿ ಇಂದು ಸಂಜೆ 4 ಗಂಟೆ ವೇಳೆಗೆ 17 ಅಂಗವಿಕಲರು ಹಾಗೂ 248 ಹಿರಿಯ ನಾಗರಿಕರು ಅಂಚೆ ಮತಪತ್ರದ ಮೂಲಕ ಚಲಾಯಿಸಿದರು.

ಮಾರನಬೀಡ ಗ್ರಾಮದಲ್ಲಿ ನಡೆದ ಅಂಚೆ ಮತದಾನ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಐ.ಎ.ಎಸ್. ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ವೀಕ್ಷಣೆ ಮಾಡಿದರು. ಗ್ರಾಮದ ಹನುಮವ್ವ ವಡ್ಡರ ಎಂಬುವರು ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಿದರು.

ಅಂಚೆ ಮತದಾನ ಪ್ರಕ್ರಿಯೆಗಾಗಿ ತಾಲೂಕಿನಾದ್ಯಂತ ಸೂಕ್ಷ್ಮ ವೀಕ್ಷಕರು ಹಾಗೂ ಮತಗಟ್ಟೆ ಅಧಿಕಾರಿಗಳನ್ನೊಳಗೊಂಡ ಏಳು ತಂಡಗಳನ್ನು ರಚಿಸಲಾಗಿದೆ. ಮಾರನಬೀಡ ಮತದಾನದ ಸಂದರ್ಭದಲ್ಲಿ ಕೇಂದ್ರ ವೀಕ್ಷಕರೊಂದಿಗೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್‌ ಎರಿಸ್ವಾಮಿ ಉಪಸ್ಥಿತರಿದ್ದರು.

ಈಗಾಗಲೇ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಒಪ್ಪಿಗೆ ನೀಡಿ ಮೊದಲ ದಿನ ಮತಚಲಾಯಿಸಲು ಸಾಧ್ಯವಾಗದವರಿಗೆ ಅ.19ರಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಅಧಿಕಾರಿಗಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.

ಹಾನಗಲ್ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ 6905 ಮತದಾರರು ಹಾಗೂ 3778 ಅಂಗವಿಕಲ ಮತದಾರರಿದ್ದಾರೆ. ಈ ಪೈಕಿ 450 ಹಿರಿಯ ಹಾಗೂ 28 ವಿಕಲಚೇತನ ಮತದಾರರು ಮತದಾನಕ್ಕೆ ಒಪ್ಪಿಗೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.