ಶನಿವಾರ, ಸೆಪ್ಟೆಂಬರ್ 25, 2021
28 °C
ಚರಂಡಿ, ಕಾಲುವೆಗಳಲ್ಲಿ ಹೂಳು–ತಪ್ಪದ ಗೋಳು: ಕಾಟಾಚಾರದ ಕಾಮಗಾರಿ– ಜನರಿಗೆ ಕಿರಿಕಿರಿ

ಹಾವೇರಿ: ಮಳೆಗಾಲದ ಸಿದ್ಧತೆ; ಜಿಲ್ಲೆಯಾದ್ಯಂತ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮಳೆಗಾಲ ಬಂದರೆ ಸಾಕು ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿರುವ ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗುತ್ತದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥಿತವಾದ ಚರಂಡಿ ಮತ್ತು ಕಾಲುವೆಗಳಿಲ್ಲದೆ, ಮನೆಗಳಿಗೆ ಯಾವಾಗ ನೀರು ನುಗ್ಗುತ್ತದೆಯೋ ಎಂಬ ಭಯದಲ್ಲೇ ಜನರು ಜೀವನ ದೂಡುತ್ತಿದ್ದಾರೆ. 

ಮಳೆ ನೀರು ಸರಾಗವಾಗಿ ಹರಿದು ಕೆರೆ, ಕಟ್ಟೆ, ನದಿಗಳನ್ನು ಸೇರಲು ವ್ಯವಸ್ಥಿತವಾದ ಚರಂಡಿ, ಕಾಲುವೆ, ನಾಲೆಗಳ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ. ಗುಂಡಿಬಿದ್ದ ರಸ್ತೆಗಳು ಮಳೆಗಾಲದಲ್ಲಿ ‘ಕಟ್ಟೆ’ಗಳಾಗಿ ಪರಿವರ್ತನೆಯಾಗುತ್ತವೆ. ಪ್ರತಿ ಮಳೆಗಾಲದಲ್ಲೂ ಅವಘಡ ಉಂಟಾಗುತ್ತಿದ್ದರೂ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪಾಠ ಕಲಿತಿಲ್ಲ. 

ಮಳೆಗಾಲದಲ್ಲಿ ಅಲ್ಲಲ್ಲಿ ಚರಂಡಿ, ಕಾಲುವೆಗಳ ಹೂಳು ತೆಗೆಯುವ ಪ್ರಯತ್ನಗಳು ನಡೆಯುತ್ತವೆಯಾದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಜಿಲ್ಲೆಯಾದ್ಯಂತ ಹೂಳು ತುಂಬಿದ ಚರಂಡಿಗಳು, ಗಿಡಗಂಟಿ ಬೆಳೆದ ಕಾಲುವೆಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿವೆ. 

ಹಾವೇರಿ ನಗರದಲ್ಲಿ ರಾಜಕಾಲುವೆ ಒತ್ತುವರಿಯಿಂದ ಬಸ್‌ ನಿಲ್ದಾಣ, ಪ್ರವಾಸಿ ಮಂದಿರ ಸುತ್ತಮುತ್ತ ಮೊಣಕಾಲುದ್ದ ನೀರು ಬಂದು ನಿಲ್ಲುತ್ತದೆ. ಹಾನಗಲ್‌ ಮುಖ್ಯರಸ್ತೆ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಶಿವಾಜಿನಗರದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ತಗ್ಗಿನ ಮನೆಗಳಿಗೆ ನೀರು ನುಗ್ಗುತ್ತದೆ.  ಶಿವಬಸವೇಶ್ವರ ನಗರದಿಂದ ನಾಗೇಂದ್ರನಮಟ್ಟಿಗೆ ಹೋಗುವ ಮುಖ್ಯರಸ್ತೆಯ ಪಕ್ಕದ ಚರಂಡಿ ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿದೆ. ರೈಲ್ವೆ ಕಳೆಸೇತುವೆ ಜಲಾವೃತವಾಗಿ ಜನರು ಜೀವ ಕೈಯಲ್ಲಿಡಿದು ಪ್ರಯಾಣ ಮಾಡುವ ದುಸ್ಥಿತಿ ಪ್ರತಿ ಮಳೆಗಾಲದಲ್ಲೂ ಉಂಟಾಗುತ್ತದೆ. 

‘ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಆದೇಶದ ಮೇರೆಗೆ, ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಾದ್ಯಂತ ಚರಂಡಿ ದುರಸ್ತಿ ಮತ್ತು ನಿರ್ಮಾಣ ಕಾರ್ಯಕ್ಕೆ ‘ಡಿಪಿಆರ್‌’ ಸಿದ್ಧಪಡಿಸಲಾಗಿದೆ. ಶೀಘ್ರ ಕಾಮಗಾರಿ ನಡೆಸಲಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಮಹಾಂತೇಶ ನರೇಗಲ್‌ ತಿಳಿಸಿದರು. 

ಸುಣ್ಣದ ಕಾಲುವೆ ತುಂಬ ಗಿಡಗಂಟಿ
ಹಿರೇಕೆರೂರ:
ಪಟ್ಟಣದ ಮುಖ್ಯ ರಸ್ತೆಯ ಉಭಯ ಬದಿಗಳಲ್ಲಿ ಅಲ್ಲಲ್ಲಿ ಚರಂಡಿಗಳು ಕಸದಿಂದ ತುಂಬಿರುವುದರಿಂದ ಭಾರಿ ಮಳೆ ಬಂದಾಗ ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ.

ಕಾಲ್ವೀಹಳ್ಳಿ ಕೆರೆ ತುಂಬಿ ಹರಿಯುವ ನೀರು ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆ ಸೇರುತ್ತದೆ. ಪಟ್ಟಣದ ಮಳೆಯ ನೀರು ಸಹ ಸುಣ್ಣದ ಕಾಲುವೆ ಸೇರುತ್ತದೆ. ಇತ್ತೀಚೆಗೆ ಈ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಮಾಡಲಾಗಿದೆ. ಆದರೆ ಕಾಲುವೆಯಲ್ಲಿ ಸಾಕಷ್ಟು ಗಿಡಗಂಟಿ ಬೆಳೆದಿದ್ದು, ನೀರು ಹರಿಯಲು ಅಡೆತಡೆ ಉಂಟು ಮಾಡುತ್ತಿದೆ.

ಫೆಬ್ರುವರಿ ತಿಂಗಳಲ್ಲಿ ನಡೆದ ದುರ್ಗಾದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಸುಣ್ಣದ ಕಾಲುವೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದನ್ನು ಸ್ವಚ್ಛಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‌ ಸೂಚಿಸಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ತಿಳಿಸಿದರು.

ಚರಂಡಿ ಅವ್ಯವಸ್ಥೆ: ಬೇಸತ್ತ ಜನತೆ
ರಟ್ಟೀಹಳ್ಳಿ: 
ಪಟ್ಟಣದ ಆರ್.ಎಚ್. ಬಡಾವಣೆ, ಕೋಟೆ ಭಾಗ, ಲಯನ್ಸ್ ಶಾಲಾ ಹಿಂಭಾಗ, ಕಾರಂಜಿ ಸರ್ಕಲ್, ತುಮ್ಮಿನಕಟ್ಟಿ ರಸ್ತೆ, ತರಳುಬಾಳು ಬಡಾವಣೆ, ಬನಶಂಕರ ನಗರ ಮುಂತಾದ ಅನೇಕ ಕಡೆ ಸುವ್ಯವಸ್ಥಿತವಾದ ಚರಂಡಿ ಕಾಲುವೆಗಳು ನಿರ್ಮಾಣವಾಗಿಲ್ಲ.

ಅಲ್ಲಲ್ಲಿ ಸಿ.ಡಿ. ಗಳ ಕೊರತೆಯಿಂದ ಚರಂಡಿ ಕಟ್ಟಿಕೊಂಡು, ಕೊಳಚೆ ನೀರು ರಸ್ತೆಯ ಮೇಲೆ ಹರಿಯವಂತಾಗಿದೆ. ನಿಯಮಿತವಾಗಿ ಚರಂಡಿಗಳನ್ನು ಪಟ್ಟಣ ಪಂಚಾಯ್ತಿಯಿಂದ ಸ್ವಚ್ಛಗೊಳಿಸುತ್ತಿಲ್ಲ. ತೆರಿಗೆ ಹಣ ಸಂಗ್ರಹವಾಗುತ್ತಿದ್ದರೂ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿಲ್ಲ ಎಂದು ನಿವಾಸಿಗಳು ದೂರಿದರು.

ರಾಜಕಾಲುವೆ ಒತ್ತುವರಿ: ತಪ್ಪದ ಅವಾಂತರ
ರಾಣೆಬೆನ್ನೂರು:
ಇಲ್ಲಿನ ಉಮಾಶಂಕರ ನಗರದಿಂದ ಮೃತ್ಯುಂಜಯ ನಗರ ಹಾಗೂ ಚೌಡೇಶ್ವರಿ ನಗರದ ಚೌಡೇಶ್ವರಿ ದೇವಸ್ಥಾನದವರೆಗೆ ಹರಿಯುವ ರಾಜಕಾಲುವೆ ಒತ್ತುವರಿಯಾಗಿರುವುದರಿಂದ ಪಂಚಮುಖಿ ಆಂಜನೇಯ ದೇವಸ್ಥಾನದ ಬಳಿ ಮಳೆ ನೀರು ಪ್ರತಿಸಲ ಮನೆಗಳಿಗೆ ನುಗ್ಗುತ್ತದೆ. 

ನಗರದಲ್ಲಿ ಯುಜಿಡಿ ಮತ್ತು 24/7 ಕಾಮಗಾರಿ ಮುಗಿದ ಕಾಮಗಾರಿಗೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚದೇ ತೇಪೆ ಹಚ್ಚುವ ಕೆಲಸ ಮಾತ್ರ ನಡೆದಿದೆ. ‘ನಾವು ನಗರಸಭೆಗೆ ಸಂಬಂಧಿಸಿದ ಹಣ ತುಂಬಿದ್ದೇವೆ. ನಗರಸಭೆಯವರು ರಸ್ತೆ ದುರಸ್ತಿ ಪಡಿಸಬೇಕು’ ಎನ್ನುತ್ತಾರೆ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳು. 

ಚರಂಡಿ ಮರು ನಿರ್ಮಾಣವಾಗಿಲ್ಲ!
ಬ್ಯಾಡಗಿ
: ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಹಿನ್ನಲೆಯಲ್ಲಿ ಮೂರು ವರ್ಷಗಳ ಹಿಂದೆ ತೆರವುಗೊಳಿಸಿದ ಚರಂಡಿಗಳನ್ನು ಮರು ನಿರ್ಮಾಣ ಮಾಡಿಲ್ಲ. ಇದರಿಂದ ಮಳೆ ಬಂದರೆ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಅಲ್ಲದೆ ಶೌಚದ ನೀರು ರಸ್ತೆಗೆ ಹರಿಯುತ್ತದೆ. ಕೂಡಲೇ ಚರಂಡಿಗಳ ಮರು ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಬೇಕು ಎಂದು ವರ್ತಕ ಬಸವರಾಜ ಕುಬಸದ ಒತ್ತಾಯಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ರಾಜಕಾಲುವೆಗಳ ಸಮೀಕ್ಷೆ ನಡೆಸಲಾಗುತ್ತಿದೆ. ಕದರಮಂಡಲಗಿ ಸೇರಿದಂತೆ ಮೂರ್ನಾಲ್ಕು ಗ್ರಾಮಗಳಲ್ಲಿ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ನೀರು ಸರಾಗವಾಗಿ ಹರಿಯಲು ಕ್ರಮ ಕೈಕೊಳ್ಳುತ್ತೇವೆ’ ಎಂದು ಪ್ರಭಾರ ಇಒ ಎನ್.ತಿಮ್ಮಾರೆಡ್ಡಿ ಹೇಳಿದರು.

ಜೋರು ಮಳೆಯಾದರೆ ಆತಂಕ ಸೃಷ್ಟಿ
ಹಾನಗಲ್:
ಮಳೆ ಸೃಷ್ಟಿಸುವ ಅನಾಹುತಗಳ ನಿಗ್ರಹಕ್ಕಾಗಿ ಶಾಶ್ವತ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ. ಧಾರಾಕಾರ ಮಳೆಯಾಗುತ್ತಿದ್ದರೆ ಇಲ್ಲಿನ ಕೆಲವು ಬಡಾವಣೆ ನಿವಾಸಿಗಳಲ್ಲಿ ಆತಂಕ ಶುರುವಾಗುತ್ತದೆ.

ಮಳೆಗಾಲಕ್ಕೂ ಮುನ್ನ ಪಟ್ಟಣದಲ್ಲಿ ಪ್ರಮುಖ ಚರಂಡಿಗಳಲ್ಲಿ ಹೂಳೆತ್ತುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಗಾಂಧಿ ವೃತ್ತದಿಂದ ಕಲ್ಲಬಾವಿ ಕ್ರಾಸ್‌ ತನಕ ಮಳೆ ನೀರು ಮೊಣಕಾಲು ಮಟ್ಟದವರೆಗೂ ಹರಿಯುತ್ತದೆ. ಇದರಿಂದ ವಾಹನ ಸಂಚಾರ ದುಸ್ತರವಾಗುತ್ತದೆ. 

ರಾತ್ರಿಯಿಡೀ ಮಳೆ ಸುರಿದರೆ ಕುಮಾರೇಶ್ವರ ನಗರ ಬೆಳಗಾಗುವಷ್ಟರಲ್ಲಿ ನೀರಿನಿಂದ ಆವೃತವಾಗಿರುತ್ತದೆ. ಇಲ್ಲಿನ ನಿವಾಸಿಗಳು ಜೋರು ಮಳೆಯಾದರೆ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ಇದೆ. ಇದೇ ರೀತಿ ನವನಗರ ಮತ್ತಿತರ ತಗ್ಗು ಪ್ರದೇಶಗಳ ಪರಿಸ್ಥಿತಿ ಇದೆ. 

ಮನೆಗಳಿಗೆ ನುಗ್ಗುವ ಮಳೆ ನೀರು
ಸವಣೂರ:
ಇಲ್ಲಿನ ಪುರಸಭೆ ವ್ಯಾಪ್ತಿಯ ಹಲವಾರು ಬಡಾವಣೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಬಡಾವಣೆಗಳ ಚರಂಡಿಗಳು ತ್ಯಾಜ್ಯವನ್ನು ತುಂಬಿಕೊಂಡು ದುರ್ವಾಸನೆ ಬೀರಿದರೆ, ಇನ್ನು ಕೆಲ ಬಡಾವಣೆಗಳಲ್ಲಿ ಚರಂಡಿಗಳಿಲ್ಲದೆ ತ್ಯಾಜ್ಯದ ನೀರು ಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಜನರನ್ನು ತೊಂದರೆಗೆ ಸಿಲುಕಿಸಿದ ಘಟನೆಗಳು ಪಟ್ಟಣದ ಭೋವಿ ಓಣಿ, ಸಮಗಾರ ಓಣಿಯಲ್ಲಿ ಕಾಣಬಹುದಾಗಿದೆ.

‘ಸವಣೂರ ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಚರಂಡಿಗಳ ಸ್ವಚ್ಛತೆಯನ್ನು ಕೈಗೊಳ್ಳಲಾಗಿದೆ. ಅಧಿಕೃತ ಬಡಾವಣೆಯಲ್ಲಿ ಮೂಲಸೌಲಭ್ಯಗಳ ಜೊತೆಗೆ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅನಧಿಕೃತ ಬಡಾವಣೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ ಮಾಹಿತಿ ನೀಡಿದರು.

***

ನಗರಸಭೆಯಿಂದ ರಸ್ತೆ ದುರಸ್ತಿ ಕೆಲಸವಾಗಬೇಕು. ತೇವಾಂಶ ಇರುವುದರಿಂದ ವಿಳಂಬವಾಗಿದೆ. ಸದ್ಯ ಪಾಟ್‌ ಹೋಲ್‌ ತುಂಬಲಾಗಿದೆ.
– ಡಾ.ಮಹಾಂತೇಶ ಎನ್‌. ಪೌರಾಯುಕ್ತ, ರಾಣೆಬೆನ್ನೂರು ನಗರಸಭೆ

***

ಭಾರಿ ಮಳೆ ಸುರಿದರೆ ಸುಭಾಸ ನಗರಕ್ಕೆ ನೀರು ನುಗ್ಗದಂತೆ ರಾಜಕಾಲುವೆ ತೆರವು ಕಾರ್ಯ ನಡೆಯಲಿದೆ. ಪಟ್ಟಣದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ
– ಏಸು ಬೆಂಗಳೂರು, ಮುಖ್ಯಾಧಿಕಾರಿ, ಬ್ಯಾಡಗಿ ಪುರಸಭೆ

***

ವಿಪತ್ತು ನಿರ್ವಹಣೆಗಾಗಿ ನಗರಸಭೆಯಿಂದ ತಂಡ ರಚಿಸಲಾಗಿದೆ. ಚರಂಡಿ ಸ್ವಚ್ಛತೆಗಾಗಿ 30 ಗುತ್ತಿಗೆ ಪೌರಕಾರ್ಮಿಕರನ್ನು ತೆಗೆದುಕೊಳ್ಳಲಿದ್ದೇವೆ
– ಪರಶುರಾಮ ಚಲವಾದಿ, ಪೌರಾಯುಕ್ತ, ಹಾವೇರಿ ನಗರಸಭೆ

**

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು