ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ನಿಯಂತ್ರಣಕ್ಕೆ ಕಾರ್ಯಸೂಚಿ ತಯಾರಿಸಿ

ಜಿಲ್ಲಾ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ: ಸಿಇಒ ಮೊಹಮ್ಮದ್‌ ರೋಶನ್‌ ಸೂಚನೆ
Last Updated 29 ಜುಲೈ 2021, 15:14 IST
ಅಕ್ಷರ ಗಾತ್ರ

ಹಾವೇರಿ: ಸೊಳ್ಳೆಜನ್ಯ ರೋಗಗಳಾದ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಆನೆಕಾಲುರೋಗ ಹಾಗೂ ಝಿಕಾದಂತಹ ರೋಗಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಶಿಕ್ಷಣ ಕಾರ್ಯಕ್ರಮಗಳನ್ನು ಸಂಯೋಜಿಸಿ ‘ವಾರ್ಷಿಕ ಕಾರ್ಯಸೂಚಿ’ ತಯಾರಿಸುವಂತೆ ಆರೋಗ್ಯ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಿಇಒ ಮೊಹಮ್ಮದ್‌ ರೋಶನ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಜಿಲ್ಲಾ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ದಿನ, ಪ್ರತಿ ವಾರ ಕೈಗೊಳ್ಳಬೇಕಾದ ಜಾಗೃತಿ ಶಿಕ್ಷಣ ಕಾರ್ಯಕ್ರಮಗಳನ್ನು ಸ್ವಚ್ಛ ಭಾರತ ಮತ್ತು ಆರೋಗ್ಯ ಅಭಿಯಾನದ ಅನುದಾನ ಹಾಗೂ ಕಾರ್ಯಕ್ರಮಗಳನ್ನು ಸಂಯೋಜಿಸಿ ‘ವಾರ್ಷಿಕ ಕಾರ್ಯಸೂಚಿ’ ತಯಾರಿಸುವಂತೆ ಸೂಚನೆ ನೀಡಿದರು.

ಸೊಳ್ಳೆಯಿಂದ ಹರಡುವ ಕೀಟಜನ್ಯ ಕಾಯಿಲೆಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕು ಪತ್ತೆಯಾದ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕು. ರೋಗದ ಹರಡುವಿಕೆ ಮೂಲವನ್ನು ವಿಶ್ಲೇಷಣೆ ಮಾಡಬೇಕು. ಸೋಂಕಿತನ ಸಂಪರ್ಕ ಪತ್ತೆ ಮಾಡಿ ತಪಾಸಣೆ ಮಾಡಬೇಕು ಹಾಗೂ ಸೋಂಕಿತ ವಾಸಿಸುವ ಪ್ರದೇಶದಲ್ಲಿ ಸಮೀಕ್ಷೆ ಕೈಗೊಂಡು ರಕ್ತದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ಗೊಳಪಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ಹಾಗೂ ಚರಂಡಿ ನೀರು, ಕೊಳಚೆ ನೀರು ನಿಲ್ಲದಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು. ಸರಾಗವಾಗಿ ನೀರು ಹರಿದುಹೋಗುವಂತೆ ಕ್ರಮ, ಫಾಗಿಂಗ್ ಹಾಗೂ ಔಷಧ ಸಿಂಪಡಣೆ ಮಾಡಬೇಕು ಎಂದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆರೆಗಳು, ಕೃಷಿಹೊಂಡ, ತೆರೆದ ಬಾವಿಗಳನ್ನು ಗುರುತಿಸಿ ಗಪ್ಪಿ ಮತ್ತು ಗಂಬೋಷಿಯಾ ಮೀನುಗಳನ್ನು ಬಿಡುವ ನಿಟ್ಟಿನಲ್ಲಿ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮೀನುಗಳ ಉತ್ಪಾದನೆಗೆ ಮೀನುಗಾರಿಕೆ ಇಲಾಖೆಗೆ ವಹಿಸಲು ನಿರ್ಧರಿಸಲಾಯಿತು.

ಮಕ್ಕಳ ರಕ್ಷಣೆಗೆ ಸೊಳ್ಳೆಪರದೆ ವಿತರಣೆ

ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳ ಮಕ್ಕಳನ್ನು ಸೊಳ್ಳೆ ಕಡಿತದಿಂದ ರಕ್ಷಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆರೋಗ್ಯ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸೊಳ್ಳೆಪರದೆ ಪೂರೈಕೆ ಅಥವಾ ಕಿಟಕಿ-ಬಾಗಿಲುಗಳಿಗೆ ಮೆಸ್ ಅಳವಡಿಸುವ ಕುರಿತಂತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಡಾ.ನೀಲೇಶ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT