ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಜಿಲ್ಲೆಯಲ್ಲಿ 92 ಕೋಲ್ಡ್‌ ಚೈನ್‌ ಪಾಯಿಂಟ್ಸ್‌; ಆರೋಗ್ಯ ಕಾರ್ಯಕರ್ತರ ಪಟ್ಟಿ ತಯಾರಿ
Last Updated 7 ನವೆಂಬರ್ 2020, 3:10 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರದಿಂದ ಬಹು ನಿರೀಕ್ಷಿತ ಕೋವಿಡ್‌–19 ಲಸಿಕೆಯನ್ನು ರಾಜ್ಯಗಳಲ್ಲಿ ಪರಿಚಯಿಸಲು ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಈ ಸಂಬಂಧ, ಲಸಿಕೆಯನ್ನು ವೈಜ್ಞಾನಿಕವಾಗಿ ಮತ್ತು ಸುರಕ್ಷಿತವಾಗಿ ಸಂಗ್ರಹಿಸಿಡಲು ಜಿಲ್ಲೆಯಲ್ಲಿ 92 ‘ಕೋಲ್ಡ್‌ ಚೈನ್‌ ಪಾಯಿಂಟ್ಸ್‌’ಗಳನ್ನು ಸಜ್ಜುಗೊಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇಲೆ ಕೋವಿಡ್‌–19 ಲಸಿಕೆ ನೀಡಲು ಯೋಜಿಸಿದೆ. ಹೀಗಾಗಿ, ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಮಾಹಿತಿಯನ್ನು ಸಕಾಲದಲ್ಲಿ ‘ಕೋವಿಡ್‌ 19 ವ್ಯಾಕ್ಸಿನೇಷನ್‌ ಬೆನಿಫಿಷರಿ ಮ್ಯಾನೇಜ್‌ಮೆಂಟ್ ಸಿಸ್ಟಂ’‌ (ಸಿ.ವಿ.ಬಿ.ಎಂ.ಎಸ್‌)ನಲ್ಲಿ ಅಪ್‌ಲೋಡ್‌ ಮಾಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್‌ ಸೂಚನೆ ನೀಡಿದ್ದಾರೆ.

‘ಡೇಟಾ ಬೇಸ್‌’ ತಯಾರಿ: ಯುನೈಟೆಡ್‌ ನೇಷನ್ಸ್‌‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ (ಯುಎನ್‌ಡಿಪಿ) ಸಂಸ್ಥೆಯ ತಾಂತ್ರಿಕ ನೆರವನ್ನು ಪಡೆದು, ‘ಡೇಟಾ ಬೇಸ್‌’ ತಯಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು–67, ಸಮುದಾಯ ಆರೋಗ್ಯ ಕೇಂದ್ರಗಳು–5, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು–6, ಜಿಲ್ಲಾ ಆಸ್ಪತ್ರೆ–1 ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ–4 ಸೇರಿದಂತೆ ಒಟ್ಟು 83 ಸರ್ಕಾರಿ ಸಂಸ್ಥೆಗಳ ಪಟ್ಟಿ ಮಾಡಲಾಗಿದೆ.

‘ಡೇಟಾ ಬೇಸ್‌’ ತಯಾರಿಯಲ್ಲಿ ಮೊದಲ ಹಂತದಲ್ಲಿ ‘ಸರ್ಕಾರಿ ಸಂಸ್ಥೆಗಳು’ ಮತ್ತು ‘ಖಾಸಗಿ ಸಂಸ್ಥೆಗಳು’ ಎಂಬ ಎರಡು ವರ್ಗೀಕರಣ ಮಾಡಲಾಗಿದೆ. 1500 ಆಶಾ ಕಾರ್ಯಕರ್ತೆಯರು, 2 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 7500 ಆರೋಗ್ಯ ಕಾರ್ಯಕರ್ತರ ಹೆಸರು, ವಿಳಾಸ, ಮೊಬೈಲ್ ಫೋನ್‌‌ ಸಂಖ್ಯೆ, ಗುರುತಿನ ಚೀಟಿಯ ಸಂಪೂರ್ಣ ವಿವರವನ್ನು ಈಗಾಗಲೇ ಸಂಗ್ರಹಿಸಿಡಲಾಗಿದೆ.

ನರ್ಸಿಂಗ್‌ ಹೋಂ, ಕ್ಲಿನಿಕ್‌, ಆಯುಷ್‌ ಕ್ಲಿನಿಕ್‌, ಲ್ಯಾಬ್‌ ಸೇರಿದಂತೆ ಒಟ್ಟು 457 ಖಾಸಗಿ ಸಂಸ್ಥೆಗಳು ಜಿಲ್ಲೆಯಲ್ಲಿವೆ. ಈ ಪೈಕಿ 170 ಸಂಸ್ಥೆಗಳ ಸಿಬ್ಬಂದಿ ವಿವರವನ್ನು ಕಲೆ ಹಾಕಿದ್ದು, ಶೇ 38ರಷ್ಟು ಪ್ರಗತಿ ಸಾಧಿಸಲಾಗಿದೆ. ನ. 15ರೊಳಗೆ ಜಿಲ್ಲೆಯ ಸಂಪೂರ್ಣ ‘ಡೇಟಾ ಬೇಸ್‌’ ಸಿದ್ಧವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕೋಲ್ಡ್‌ಚೈನ್‌ ಪಾಯಿಂಟ್ಸ್‌: ‘ಜಿಲ್ಲೆಯಲ್ಲಿ ‘ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ’ದಡಿಜಿಲ್ಲಾ ಲಸಿಕಾ ಕೇಂದ್ರ–1, ತಾಲ್ಲೂಕು ಮಟ್ಟದಲ್ಲಿ ಬ್ಲಾಕ್‌ ಲಸಿಕಾ ಕೇಂದ್ರಗಳು–7 ಸೇರಿದಂತೆ ಒಟ್ಟು 92 ಕೋಲ್ಡ್‌ ಚೈನ್‌ ಪಾಯಿಂಟ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ಪಾಯಿಂಟ್‌ಗಳಲ್ಲಿ ಪೋಲಿಯೊ, ಬಿಸಿಜಿ, ದಡಾರ, ರುಬೆಲ್ಲಾ ಸೇರಿ 9 ಮಾರಕ ರೋಗಗಳ ಲಸಿಕೆಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಇದೇ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಸಂಗ್ರಹಿಸಿಡಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ.ಜಯಾನಂದ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್‌ ಹಾಗೂ ಯುಎನ್‌ಡಿಪಿ ಸಂಸ್ಥೆಗಳು ಸಹಯೋಗದಲ್ಲಿಕೋವಿಡ್‌ ಲಸಿಕಾ ಪ್ರಕ್ರಿಯೆ ನಡೆಯು
ತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಎರಡನೇ ಹಂತದಲ್ಲಿ ಹೈ ರಿಸ್ಕ್‌ ಅಡಲ್ಟ್ಸ್‌ (60 ವರ್ಷ ಮೇಲ್ಪಟ್ಟ
ವರು, ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು) ಹಾಗೂ ಮೂರನೇ ಹಂತದಲ್ಲಿ ಉಳಿದವರು ಈ ಆದ್ಯತೆ ಮೇಲೆ ‘ಡೇಟಾ ಬೇಸ್‌’ ತಯಾರಿ ನಡೆಯುತ್ತಿದೆ.

ಅಂಕಿಅಂಶ

22 ಸಾವಿರ - ಆರೋಗ್ಯ ಕಾರ್ಯಕರ್ತರ ಪಟ್ಟಿ ತಯಾರಿ

1093 - ವ್ಯಾಕ್ಸಿನ್‌ ಕ್ಯಾರಿಯರ್‌ಗಳು

87 - ಕೋಲ್ಡ್‌ ಬಾಕ್ಸ್‌ಗಳು

6980 - ಐಸ್‌ ಪ್ಯಾಕ್‌ಗಳು

166 - ಉಪಕರಣಗಳು ಲಭ್ಯ

ಜಿಲ್ಲೆಯಾದ್ಯಂತ ಸುಮಾರು 166 ಡೀಪ್‌ ಫ್ರೀಜರ್ಸ್‌ ಮತ್ತು ಐಸ್‌ ಲೈನ್ಡ್‌ ರೆಫ್ರಿಜರೇಟರ್ (ಐ.ಎಲ್‌.ಆರ್‌.) ಉಪಕರಣಗಳು ಲಭ್ಯವಿವೆ. ಡೀಪ್‌ ಫ್ರೀಜರ್‌ಗಳಲ್ಲಿ ಐಸ್‌ ಪ್ಯಾಕ್‌ಗಳನ್ನು ತಯಾರಿ ಮಾಡಲಾಗುತ್ತದೆ. ಐ.ಎಲ್‌.ಆರ್‌. ಉಪಕರಣಗಳಲ್ಲಿ ‘ಕೋವಿಡ್‌ ಲಸಿಕೆ’ ಸಂಗ್ರಹಿಸಿಡಲಾಗುತ್ತದೆ. ‘ಟೆಂಪರೇಚರ್‌ ಲಾಗರ್‌ ಮಷಿನ್‌’ಗಳನ್ನು ಈಗಾಗಲೇ ಅನುಷ್ಠಾನ ಮಾಡಲಾಗಿದೆ. ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌ (ಇ.ವಿ.ಐ.ಎನ್‌) ಮೂಲಕ ಲಸಿಕೆಯನ್ನು2ರಿಂದ 8 ಡಿಗ್ರಿ ತಾಪಮಾನದಲ್ಲಿ ಸುರಕ್ಷಿತವಾಗಿಡಲು ‘ಯುಎನ್‌ಡಿಪಿ’ಯ ವ್ಯಾಕ್ಸಿನ್ ಕೋಲ್ಡ್‌ ಚೈನ್‌ ವ್ಯವಸ್ಥಾಪಕರು ನಿಗಾ ಇಡುತ್ತಾರೆ ಎಂದು ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ.ಜಯಾನಂದ ಮಾಹಿತಿ ನೀಡಿದರು.

***

– ಜಿಲ್ಲಾ ಲಸಿಕಾ ಕೇಂದ್ರದಿಂದ ಫಲಾನುಭವಿಗೆ ಕೋವಿಡ್‌ ಲಸಿಕೆ ನೀಡುವವರೆಗೂ ‘ಕೋಲ್ಡ್‌ ಚೈನ್’ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಲಸಿಕೆ ಬಂದರೆ ನೀಡಲು ಸಿದ್ಧವಾಗಿದ್ದೇವೆ.

- ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT