ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತವಿದಳನ ಘಟಕ ಉನ್ನತೀಕರಣಕ್ಕೆ ಒತ್ತು

ಹಾವೇರಿಗೆ ಲಾ ಕಾಲೇಜ್‌, ಸೈನಿಕ ಶಾಲೆಗೆ ಸರ್ಕಾರಕ್ಕೆ ಪ್ರಸ್ತಾವ: ನೆಹರು ಓಲೇಕಾರ
Last Updated 24 ಜೂನ್ 2020, 0:47 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲಾ ಆಸ್ಪತ್ರೆಯ ರಕ್ತವಿದಳನ ಘಟಕವನ್ನು ₹5 ಲಕ್ಷ ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ಜೋಡಣೆ ಮಾಡಿ ಉನ್ನತೀಕರಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಶಾಸಕರಾದ ನೆಹರು ಓಲೇಕಾರ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯ ರಕ್ತವಿದಳನ ಘಟಕ ಹೆಚ್ಚುವರಿ ಸೌಲಭ್ಯಗಳ ಆಧುನೀಕರಣ ಘಟಕವನ್ನುಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಡೋನರ್ ಕೋಚ್, ಬ್ಲಡ್ ಕಲೆಕ್ಷನ್ ಮಾನಿಟರ್, ಮ್ಯಾನುವಲ್ ಪ್ಲಾಸ್ಮಾ ಎಕ್ಸ್‌ಪ್ರೆಸರ್‌, ಜೆಲ್ ಇನ್‍ಕುಬೇಟರ್ ಮತ್ತು ಸೆಂಟ್ರಿಪೂಜ್, ಬ್ಲಡ್ ಬ್ಯಾಗ್ ಟ್ಯೂಬ್ ಟ್ಯೂಬ್ ಸೀಲರ್, ಡೊಮೆಸ್ಟಿಕ್ ರೆಫ್ರಿಜರೇಟರ್ ಉಪಕರಣಗಳನ್ನು‌ ರಕ್ತ ವಿದಳನಾ ಘಟಕದಲ್ಲಿ ಅಳವಡಿಸಿ, ಸುಸಜ್ಜಿತ ಘಟಕವಾಗಿ ಉನ್ನತೀಕರಿಸಲಾಗಿದೆ ಎಂದು ಹೇಳಿದರು.

ರಕ್ತವಿದಳನ ಘಟಕ ಉನ್ನತೀಕರಣಗೊಂಡಿರುವುದರಿಂದ ಬಡವರಿಗೆ, ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರ ಅಗತ್ಯಕ್ಕೆ ಅನುಸಾರವಾಗಿ ರಕ್ತವಿದಳನ ಘಟಕ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಬೇಕಾಗುವ ಉನ್ನತ ವೈದ್ಯಕೀಯ ಅವಶ್ಯ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ವಿವಿಧ ಕಾಮಗಾರಿಗಳು ಶೀಘ್ರದಲ್ಲಿ:ಮೆಡಿಕಲ್ ಕಾಲೇಜ್‌ಗೆ ಎರಡು ತಿಂಗಳೊಳಗೆ ಭೂಮಿಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು. ಭೂಮಿಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವೈದ್ಯಕೀಯ ಕಾಲೇಜು ಜೊತೆಗೆ ನೆಲೋಗಲ್ಲ ಗುಡ್ಡದಲ್ಲಿ ಆಯುಷ್ಮಾನ್ ಆಸ್ಪತ್ರೆಗೆ 9 ಎಕರೆ ಜಮೀನು ಮಂಜೂರಾಗಿದೆ. ₹20 ಕೋಟಿ ಮಂಜೂರಾಗಿದೆ. ಒಂದು ವಾರದಲ್ಲಿ ಮಂಜೂರಾತಿ ದಾಖಲೆಗಳು ಸಿದ್ಧವಾಗಲಿವೆ. ಶೀಘ್ರದಲ್ಲಿಯೇ ಅದರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಲಾ ಕಾಲೇಜ್:ಜಿಲ್ಲೆಯಲ್ಲಿ ಕಾನೂನು ಕಾಲೇಜ್‍ಗೆ ಹಾಗೂ ಜೆ.ಟಿ.ಡಿ.ಸಿ ಕಾಲೇಜ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಏಕಲವ್ಯ ಮಾದರಿಯ ಶಾಲೆ ಹಾಗೂ ಎಸ್ಟಿ ಮುರಾರ್ಜಿ ವಸತಿ ಶಾಲೆ ಮಂಜೂರಾಗಿದೆ. ಬಸಾಪುರದಲ್ಲಿ 60 ಎಕರೆ ಜಾಗದಲ್ಲಿ ಸೈನಿಕ ತರಬೇತಿಯ ವಸತಿ ಶಾಲೆ ಮತ್ತು ಜಿಲ್ಲೆಯಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪಿಸಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ವನ ಮಹೋತ್ಸವ:ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಡಾ.ಸುರೇಶ ಪೂಜಾರ ಮತ್ತಿತರರು ಸಸಿ ನೆಟ್ಟು ನಿರೂಪಿಸಿದರು. ರಕ್ತ ವಿದಳನಾ ಘಟಕದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಬಸವರಾಜ ಕಮತದ, ನಗರಸಭೆ ಸದಸ್ಯ ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT