ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲುಹಕ್ಕಿಗಳಿಂದ ಮಾಸ್ಕ್‌ ತಯಾರಿಕೆ

ಕೆರೆಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ವಿಶೇಷ ತರಬೇತಿ: ಕೊರೊನಾ ಸೋಂಕು ತಡೆಗೆ ದಿಟ್ಟ ಹೆಜ್ಜೆ
Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಅತಿ ಬೇಡಿಕೆಯಿರುವ ಮಾಸ್ಕ್‌ (ಮುಖಗವಸು) ತಯಾರಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಜಿಲ್ಲಾ ಕಾರಾಗೃಹದ ಜೈಲುಹಕ್ಕಿಗಳು ಕೊರೊನಾ ವೈರಸ್‌ ಸೋಂಕು ತಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್‌ ದಾಳಿಗೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕು ತಡೆಗಟ್ಟಲು ಅತ್ಯವಶ್ಯವಾಗಿ ಬೇಕಾದ ಮಾಸ್ಕ್‌, ಸ್ಯಾನಿಟೈಸರ್‌, ಸ್ವ–ಸುರಕ್ಷಾ ಕವಚ, ವೆಂಟಿಲೇಟರ್‌ಗಳಿಗೆ ಜಿಲ್ಲೆಯಲ್ಲಿ ಇನ್ನಿಲ್ಲದ ಬೇಡಿಕೆ ಬಂದಿದೆ. ಪ್ರತಿಯೊಬ್ಬರೂ ಮಾಸ್ಕ್‌ ಖರೀದಿಸಲು ಔಷಧ ಅಂಗಡಿ, ಶಾಪಿಂಗ್‌ ಮಾಲ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಸಾಕಷ್ಟು ಪೂರೈಕೆ ಇಲ್ಲದ ಕಾರಣ ಮಾಸ್ಕ್‌ಗಳು ಎಲ್ಲರಿಗೂ ಸಿಗುತ್ತಿಲ್ಲ.

ನಿತ್ಯ 500 ಮಾಸ್ಕ್‌ ತಯಾರಿಕೆ: ಪ್ರತಿದಿನ 500 ಮಾಸ್ಕ್ ತಯಾರಿಸಬೇಕು ಎಂದು ಇಲ್ಲಿನ ಜೈಲುಹಕ್ಕಿಗಳು ಗುರಿ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮೂರು ದಿನಗಳಿಂದ ನಿತ್ಯ ಬೆಳಿಗ್ಗೆ 8ರಿಂದ 11.30ರವರೆಗೆ ಮತ್ತು ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಮೂವರು ಮಹಿಳಾ ಕೈದಿಗಳು ಮತ್ತು ಐವರು ಪುರುಷ ಕೈದಿಗಳು ಸೇರಿದಂತೆ ಒಟ್ಟು ಎಂಟು ಕೈದಿಗಳು ‘ಕಾಟನ್‌ ಮಾಸ್ಕ್‌’ ತಯಾರಿಕೆಯಲ್ಲಿ ನಿರತರಾಗಿದ್ದಾರೆ.ಈಗಾಗಲೇ ಸಾವಿರಕ್ಕೂ ಹೆಚ್ಚು ದ್ವಿ–ಪದರದ ಹಸಿರು ಬಣ್ಣದ ಮಾಸ್ಕ್‌ಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ತರಬೇತಿ: ‘ವಿಜಯ ಬ್ಯಾಂಕ್‌ ಸ್ವ–ಉದ್ಯೋಗ ತರಬೇತಿ ಸಂಸ್ಥೆ ಮತ್ತು ಕಾರಾಗೃಹದ ಸಹಯೋಗದಲ್ಲಿ ಒಟ್ಟು 30 ಕೈದಿಗಳಿಗೆ 10 ದಿನಗಳ ಹೊಲಿಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೇಪರ್‌ ಬ್ಯಾಗ್‌, ಬಟ್ಟೆ ಬ್ಯಾಗ್‌, ಸೆಣಬಿನ ಕೈಚೀಲ, ಮುಖಗವಸು ಸೇರಿದಂತೆ ವಿಶೇಷ ಹೊಲಿಗೆ ತರಬೇತಿ ನೀಡಿದ್ದೇವೆ. ಇವರಲ್ಲಿ ಆಯ್ದ ಎಂಟು ಕೈದಿಗಳು 8 ಹೊಲಿಗೆ ಯಂತ್ರಗಳ ಮೂಲಕ ‘ಕಾಟನ್‌ ಮಾಸ್ಕ್‌’ ತಯಾರಿಸುತ್ತಿದ್ದಾರೆ. ಇಬ್ಬರು ನುರಿತ ಟೇಲರ್‌ಗಳಿದ್ದಾರೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ತಿಮ್ಮಣ್ಣ ಬಿ.ಭಜಂತ್ರಿ ಮಾಹಿತಿ ನೀಡಿದರು.

‘ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಮಾಸ್ಕ್ ತಯಾರಿಸಿಕೊಡಲು ಬೇಡಿಕೆ ಬಂದಿತ್ತು. ಅದರಂತೆ ಈಗಾಗಲೇ ಒಂದು ಸಾವಿರ ಮಾಸ್ಕ್‌ಗಳನ್ನು ಸಿದ್ಧಪಡಿಸಿ ಕೊಡಲಾಗಿದೆ. ಈಗ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಾರ್ಯಾಲಯದಿಂದ ಆರೋಗ್ಯ ಸಿಬ್ಬಂದಿಗಾಗಿ 500 ಮಾಸ್ಕ್‌, ಜಿಲ್ಲಾ ಪಂಚಾಯ್ತಿ ಸಿಇಒ ಅವರಿಂದ 1,000, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಂದ ನಿತ್ಯ 500 ಮಾಸ್ಕ್‌ ತಯಾರಿಸಿ ಕೊಡುವಂತೆ ಬೇಡಿಕೆ ಬಂದಿದೆ. ನಮ್ಮ ಕೈದಿಗಳು ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಭಜಂತ್ರಿ ತಿಳಿಸಿದರು.

ತಲಾ ಮಾಸ್ಕ್‌ಗೆ ₹6ರ ದರದಲ್ಲಿ ತಯಾರು ಮಾಡಿಕೊಡಲಾಗುತ್ತಿದೆ. ದುಡಿಮೆ ಮಾಡಿದ ಕೈದಿಗಳಿಗೆ ಕೂಲಿ ನೀಡಲಾಗುತ್ತದೆ. ಮಾಸ್ಕ್‌ ಮಾರಾಟದಿಂದ ಬಂದ ಹಣ ಸರ್ಕಾರಿ ಖಜಾನೆಗೆ ಹೋಗುತ್ತದೆ. ಹಾವೇರಿ ಮತ್ತು ಹುಬ್ಬಳ್ಳಿಯಿಂದ ಬಟ್ಟೆ ತರಿಸಿ, ಈ ವರ್ಷ ಮೊದಲ ಬಾರಿಗೆ ಮಾಸ್ಕ್ ತಯಾರಿಸಿದ್ದೇವೆ. ಕೊರೊನಾ ಸೋಂಕು ತಡೆಗಟ್ಟಲು ನಮ್ಮ ಕಡೆಯಿಂದ ಒಂದು ಪುಟ್ಟ ಪ್ರಯತ್ನ ಎನ್ನುತ್ತಾರೆ ಕಾರಾಗೃಹದ ಸಿಬ್ಬಂದಿ ಮತ್ತು ಕೈದಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT