ಸೋಮವಾರ, ಆಗಸ್ಟ್ 15, 2022
22 °C
ರೇಷ್ಮೆ ನೂಲು ಘಟಕ ಸ್ಥಾಪನೆಗೆ ಸ್ಥಳ ಗುರುತಿಸಿ: ಸಚಿವ ನಾರಾಯಣಗೌಡ

ಶೀತಲೀಕರಣ ಘಟಕಕ್ಕೆ ಪ್ರಸ್ತಾವ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತರಕಾರಿ, ಮೆಣಸಿನಕಾಯಿ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳ ಶೇಖರಣೆಗಾಗಿ ರಾಜ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನೂರು ಶೀತಲೀಕರಣ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಅವಶ್ಯವಿರುವ ಶೀತಲೀಕರಣ ಘಟಕಗಳ ಕುರಿತಂತೆ ಪ್ರಸ್ತಾವ ಸಲ್ಲಿಸಿ ಎಂದು ತೋಟಗಾರಿಕೆ, ರೇಷ್ಮೆ ಮತ್ತು ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತೋಟಗಾರಿಕೆ ಚಟುವಟಿಕೆಗೆ ನೀರಿನ ಟ್ಯಾಂಕ್ ಖರೀದಿಗೆ ಅನುದಾನ, ಸ್ಪಿಂಕ್ಲರ್ ಖರೀದಿಗೆ ಬೇಕಾದ ಅನುದಾನ ಹಾಗೂ ಕೊರೊನಾ ಸಂದರ್ಭದಲ್ಲಿ ಹೂ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಅನುದಾನ ಕುರಿತಂತೆ ವಿವರ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಮಲೆನಾಡು ಅಭಿವೃದ್ಧಿ ಮಂಡಳಿಗೆ ರಾಣೆಬೆನ್ನೂರು ಹಾಗೂ ಹಾವೇರಿ ತಾಲ್ಲೂಕಿನ ಅಡಕೆ ಬೆಳೆ ರೈತರ ಸೇರ್ಪಡೆ ಮಾಡುವಂತೆ ಕೋರಲಾಯಿತು. ಈ ಕುರಿತಂತೆ ಪ್ರಸ್ತಾವ ಸಲ್ಲಿಸಲು ಸಚಿವರು ಸೂಚನೆ ನೀಡಿದರು. ಇಲಾಖೆಯ ಪ್ರಗತಿ ಕುರಿತಂತೆ ಮಾಹಿತಿ ಪಡೆದರು.

ಜಿಲ್ಲೆಗೆ ರೇಷ್ಮೆ ನೂಲು ಘಟಕ: ಅತಿ ಹೆಚ್ಚು ರೇಷ್ಮೆ ಬೆಳೆಯುವ ಹಾವೇರಿ ಜಿಲ್ಲೆಗೆ ಪ್ರತ್ಯೇಕವಾದ ರೇಷ್ಮೆ ನೂಲು ತೆಗೆಯುವ ಘಟಕ ಸ್ಥಾಪನೆಗೆ ಶೀಘ್ರವೇ ಮಂಜೂರಾತಿ ನೀಡಲಾಗುವುದು. ಹಾವೇರಿ ಸೇರಿದಂತೆ ಅಕ್ಕಪಕ್ಕದ ನಾಲ್ಕು ಜಿಲ್ಲೆಗಳನ್ನು ಈ ರೇಷ್ಮೆ ನೂಲು ತೆಗೆಯುವ ಘಟಕದ ವ್ಯಾಪ್ತಿಗೆ ತರಲಾಗುವುದು. ಈ ಕುರಿತಂತೆ ಜಮೀನನ್ನು ಗುರುತಿಸಿಕೊಂಡು ಕಾಯ್ದಿರಿಸಿಕೊಳ್ಳಲು ಸೂಚನೆ ನೀಡಿದರು.

ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನೆ ಮಾಡಿದ ಸಚಿವರು ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಈ ವರ್ಷ ₹4.6 ಕೋಟಿ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದಿರುವ ₹4.41 ಕೋಟಿ ಅನುದಾನವನ್ನು ಶೀಘ್ರವೇ ಒದಗಿಸಲಾಗುವುದು ಎಂದು ತಿಳಿಸಿದರು.

ಕಾಮಗಾರಿ ಕೂಡಲೇ ಮುಗಿಸಿ: ಪ್ರತಿ ಹದಿನೈದು ದಿನಕೊಮ್ಮೆ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಜಿಲ್ಲೆಯ ಪಟ್ಟಣ ಪಂಚಾಯತಿ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸೂಚನೆ ನೀಡಿದರು.

ರಾಣೆಬೆನ್ನೂರು ನಗರಸಭೆ ಮಳಿಗೆಗಳ ಹರಾಜು ಸೇರಿದಂತೆ ಜಿಲ್ಲೆಯಲ್ಲಿ ಹರಾಜಿಗೆ ಬಾಕಿ ಇರುವ ಮಳಿಗೆಗಳನ್ನು ಮುಂದಿನ 3 ತಿಂಗಳೊಳಗಾಗಿ ವಿಲೇವಾರಿ ಮಾಡಿ ಪುರಸಭೆ, ನಗರಸಭೆಗಳಿಗೆ ಆದಾಯ ಬರುವಂತೆ ಕ್ರಮ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ತೋಟಗಾರಿಕೆ ಉಪನಿರ್ದೇಶಕ ಎಲ್‌.ಪ್ರದೀಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಎಲ್‌. ಕೃಷ್ಣಪ್ಪ, ಪೌರಾಯುಕ್ತ ಬಸವರಾಜ ಜಿದ್ದಿ ಇತರ ಅಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.