ವಿವಿಧ ಸಂಘಟನೆಗಳಿಂದ ಪ್ರತಿಭಟನೆ

7
ಹಾವೇರಿ ಜಿ.ಎಚ್.ಕಾಲೇಜಿನ ವಿದ್ಯಾರ್ಥಿನಿ ರೇಣುಕಾ ಕೊಲೆಗೆ ವ್ಯಾಪಕ ಖಂಡನೆ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Published:
Updated:
Deccan Herald

ಹಾವೇರಿ: ನಗರದ ಜಿ.ಎಚ್. ಕಾಲೇಜು ವಿದ್ಯಾರ್ಥಿನಿ ರೇಣುಕಾ ಬ. ಪಾಟೀಲ ಕೊಲೆಯನ್ನು ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. 

ನಗರದಲ್ಲಿ ಎಸ್‌ಎಫ್ಐ, ಎಬಿವಿಪಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.  ಕಾಲೇಜಿನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

ಎಸ್ಎಫ್‌ಐ:  ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ನಗರದ ಜಿ.ಎಚ್. ಕಾಲೇಜಿನಿಂದ ಹೊಸಮನಿ ಸಿದ್ದಪ್ಪ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತರ ಮತ್ತಿತರ ಸಂಘಟನೆಗಳು ಪಾಲ್ಗೊಂಡಿದ್ದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ವಿದ್ಯಾರ್ಥಿನಿಯ ಸುಟ್ಟ ದೇಹ ನೋಡಿದರೆ ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಂದು ಹಾಕಿರುವ ಅನುಮಾನ ಕಾಡುತ್ತಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತ ಸಂಘಟನೆಯ ಅಕ್ಷತಾ ಕೆ.ಸಿ ಮಾತನಾಡಿ, ಕೋಲಾರದ ಮಾಲೂರಿನಲ್ಲಿಯೂ ಇದೇ ತರಹದ ಘಟನೆ ನಡೆದಿತ್ತು. 10ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಮುಖಂಡರಾದ ಜ್ಯೊತಿ ದೊಡ್ಮನಿ, ಪ್ರಿಯಾಂಕ, ಮುಕ್ತಾನಂದ ಹಿರೇಮನಿ, ಪ್ರಮೋದಿನಿ, ಲಕ್ಷ್ಮೀ, ಲಕ್ಷ್ಮೀ ಮಡ್ಲೂರು, ಅರ್ಪಿತಾ ಪಟ್ಟಣಶೆಟ್ಟಿ, ಕಾವ್ಯಾ, ಲತಾ, ದೀಪಾ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಹೊನ್ನಪ್ಪ ತಗಡಿನಮನಿ, ರವೀಂದ್ರ ಶೆಟ್ಟರ, ಫರೀದಾ ಇದ್ದರು.

ಎಬಿವಿಪಿ– ಕೆಎಲ್‌ಇ:
ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜು ಹಾಗೂ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಿಂದ ಹೊಸಮನಿ ಸಿದ್ದಪ್ಪ ವೃತ್ತದ ತನಕ ಪ್ರತಿಭಟನಾ ಜಾಥಾ ನಡೆಸಿದರು.

ಕೋಲಾರದ ಮಾಲೂರಿನ ಘಟನೆಯು ಮಾಸುವ ಮೊದಲೇ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಲಾಗಿದೆ. ಹೀಗಾಗಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಬೀದಿಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು ಎಂದು ಉಪನ್ಯಾಸಕ ಗುರುಪಾದಯ್ಯ ಸಾಲಿಮಠ ಒತ್ತಾಯಿಸಿದರು. ವಿದ್ಯಾರ್ಥಿನಿ ರೇಣುಕಾ ಕೊಲೆ ತನಿಖೆಯನ್ನು ತೀವ್ರಗೊಳಿಸಬೇಕು. ಕೊಲೆಗಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಮೌನಾಚರಣೆ: ಇದಕ್ಕೂ ಮೊದಲು ಜಿ.ಎಚ್‌.ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮೌನಾಚರಣೆ ನಡೆಸಿದರು. ಪ್ರತಿಭಟನಾಕಾರರು ಕಪ್ಪು ಪಟ್ಟಿಯನ್ನು ಕೈಗೆ ಧರಿಸಿಕೊಂಡಿದ್ದರು.

ಇಲ್ಲಿಗೆ ಸಮೀಪದ ಕುಣಿಮೆಳ್ಳಿಹಳ್ಳಿಯ ವರದಾ ನದಿ ಸೇತುವೆ ಬಳಿ ಗುರುವಾರ ತಾಲ್ಲೂಕಿನ ಮಣ್ಣೂರ ಗ್ರಾಮದ ರೇಣುಕಾ ಶವವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರೇಣುಕಾ ಬ. ಪಾಟೀಲ ಸೋಮವಾರದಿಂದ ನಾಪತ್ತೆಯಾಗಿದ್ದಳು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !