ಉಚಿತ ಬಸ್‌ಪಾಸ್‌ಗಾಗಿ ಎಐಡಿಎಸ್‌ಒ ಪ್ರತಿಭಟನೆ

7

ಉಚಿತ ಬಸ್‌ಪಾಸ್‌ಗಾಗಿ ಎಐಡಿಎಸ್‌ಒ ಪ್ರತಿಭಟನೆ

Published:
Updated:
ಉಚಿತ ಬಸ್‌ಪಾಸ್‌ ನೀಡಬೇಕು ಒತ್ತಾಯಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ನೇತೃತ್ವದಲ್ಲಿ ಗುರುವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ಹಾವೇರಿ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ನೇತೃತ್ವದಲ್ಲಿ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ನೇತೃತ್ವ ವಹಿಸಿದ್ದ ಸಂಘಟನೆಯ ಮುಖಂಡ ಭವಾನಿಶಂಕರ್ ಎಸ್. ಗೌಡ ಮಾತನಾಡಿ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುತ್ತೇವೆ ಎಂದು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಆದರೆ, ರಾಜ್ಯದ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

ಈ ಬಾರಿಯ ಬಜೆಟ್‌ನಲ್ಲಿ ಉಚಿತ ಬಸ್‌ಪಾಸ್ ಯೋಜನೆ ಜಾರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತುಂಬ ನಿರಾಸೆಯಾಗಿದೆ. ಆದ್ದರಿಂದ, ಸರ್ಕಾರ ಕೂಡಲೇ ಉಚಿತ ಬಸ್‌ಪಾಸ್‌ ನೀಡಬೇಕು ಎಂದು ಒತ್ತಾಯಿಸಿದರು.

ಉಚಿತ ಬಸ್‌ಪಾಸ್ ನೀಡುವ ವಿಚಾರವಾಗಿ ಸರ್ಕಾರ ಹಾಗೂ ಸಾರಿಗೆ ಸಂಸ್ಥೆಯು ಒಂದು ತಿಂಗಳಿನಿಂದ ನಾಟಕವಾಡುತ್ತಿವೆ. ರೈತರ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರವು, ಅವರ ಮಕ್ಕಳ ಬಗ್ಗೆಯೂ ಸ್ವಲ್ಪ ಚಿಂತಿಸಬೇಕಾಗಿದೆ ಎಂದರು.

ಮಹಿಳಾ ಘಟಕದ ಮುಖಂಡೆ ಮಧುಲತಾ ಗೌಡರ್ ಮಾತನಾಡಿ, ಉಚಿತ ಬಸ್‌ಪಾಸ್ ನೀಡಲು ಹೆಚ್ಚುವರಿಯಾಗಿ ₨ 600 ಕೋಟಿ ಅಗತ್ಯವಿದೆ ಎಂದು ಸರ್ಕಾರ ನೆಪವೊಡ್ಡುತ್ತಿದೆ. ಆದರೆ, ಕಳೆದ ಸರ್ಕಾರದ ಅವಧಿಯಲ್ಲಿ ಸುಮಾರು ₨ 13 ಸಾವಿರ ಕೋಟಿ ಹಣ ಬಳಕೆಯಾಗದೆ ಅನಾಥವಾಗಿದೆ ಎಂದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿತ್ತು. ಆದರೆ, ಘೋಷಣೆಯು ಸರ್ಕಾರಿ ಆದೇಶವಾಗದ ಕಾರಣ ಕೆಎಸ್‌ಆರ್‌ಟಿಸಿ ತಕರಾರು ಎತ್ತಿತು. ಅಷ್ಟೇ ಅಲ್ಲದೇ, ಈಗಿನ ಸಮ್ಮಿಶ್ರ ಸರ್ಕಾರದ ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಉಚಿತ್‌ ಬಸ್‌ಪಾಸ್‌ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ಜಾರಿಯಾಗಿಲ್ಲ ಎಂದರು.

ಸಂಘಟಕರಾದ ಮಂಜುನಾಥ ನೆಗಳೂರು, ವಿಶ್ವನಾಥ ಚಂದ್ರಗಿರಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !