ಸೋಮವಾರ, ಆಗಸ್ಟ್ 10, 2020
23 °C

ಹಾವೇರಿ | ಸುತ್ತಾಟ ನಿಲ್ಲಿಸಿ, ಕೊರೊನಾ ಓಡಿಸಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಲಾಕ್‌ಡೌನ್‌ ವೇಳೆ ಮತ್ತು ಕರ್ಫ್ಯೂ ದಿನಗಳಲ್ಲಿ ಬೇರೆಯವರ ರೀತಿ ನಾವು ಮನೆಯಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಏಕೆಂದರೆ ನಾವು ಪೊಲೀಸ್‌ ವೃತ್ತಿಯಲ್ಲಿರುವುದರಿಂದ ‘ಕೊರೊನಾ ವಾರಿಯರ್ಸ್‌’ ಆಗಿ ಅಗತ್ಯ ಸೇವೆಗಳನ್ನು ಮಾಡಲೇಬೇಕು’ ಎನ್ನುತ್ತಾರೆ ಕೋವಿಡ್‌ ಗೆದ್ದುಬಂದ ಕುಮಾರಪಟ್ಟಣದ ಸಬ್‌ಇನ್‌ಸ್ಪೆಕ್ಟರ್‌ ಅಣ್ಣಯ್ಯ ಕೆ.ಟಿ.

ಮಾರ್ಚ್‌ನಿಂದ ನಿರಂತರವಾಗಿ ಕೋವಿಡ್‌ ಡ್ಯೂಟಿಯಲ್ಲಿ ನಿರತನಾಗಿದ್ದೆ. ಹೆದ್ದಾರಿಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಮಾಡುವುದು, ಗಸ್ತು ತಿರುಗುವುದು, ಕಂಟೈನ್‌ಮೆಂಟ್‌ ವಲಯಗಳಲ್ಲಿ ಅಗತ್ಯ ಸೇವೆ ಮತ್ತು ಬಂದೋಬಸ್ತ್‌ ಒದಗಿಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ಮಾಡುತ್ತಿದ್ದೆ. 

ತಲೆಭಾರ, ಶೀತ ಮುಂತಾದ ಲಕ್ಷಣಗಳು ಕಾಣಿಸಿಕೊಂಡ ಮೇರೆಗೆ ಜುಲೈ 22ರಂದು ರಾಣೆಬೆನ್ನೂರಿಗೆ ಹೋಗಿ ‘ರ್‍ಯಾಪಿಡ್‌ ಟೆಸ್ಟ್‌’ನಲ್ಲಿ ತಪಾಸಣೆ ಮಾಡಿಸಿಕೊಂಡೆ. ಅರ್ಧಗಂಟೆಯಲ್ಲಿ ಬಂದ ವರದಿಯಲ್ಲಿ ‘ಪಾಸಿಟಿವ್‌’ ದೃಢವಾಯಿತು. ನಿತ್ಯ ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದ ನಾನು, ಸ್ವತಃ ಸೋಂಕಿತ ಎಂದು ಗೊತ್ತಾದಾಗ ಸ್ವಲ್ಪ ಆತಂಕವಾಯಿತು. ಅದಕ್ಕೆ ಕಾರಣ ಮನೆಯಲ್ಲಿದ್ದ ನನ್ನ ಮಕ್ಕಳು ಹಾಗೂ ಪತ್ನಿಗೂ ಸೋಂಕು ತಗುಲಿರಬಹುದಾ ಎಂಬ ಬಗ್ಗೆ ದಿಗಿಲಾಯಿತು. 

ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ 9 ದಿನ ಚಿಕಿತ್ಸೆ ಪಡೆದೆ. ಕಾಲ ಕಾಲಕ್ಕೆ ಕೊಡುತ್ತಿದ್ದ ಕಷಾಯ, ಬಿಸಿನೀರು, ಬೇಯಿಸಿದ ಮೊಟ್ಟೆ, ವಿಟಮಿನ್‌ ಮಾತ್ರೆ ಹಾಗೂ ಶುಶ್ರೂಷಕಿಯರ ಆರೈಕೆಯಿಂದ ಗುಣಮುಖನಾಗಿ ಜುಲೈ 30ರಂದು ಆಸ್ಪತ್ರೆಯಿಂದ ಮನೆಗೆ ಬಂದು ಕ್ವಾರಂಟೈನ್‌ನಲ್ಲಿದ್ದೇನೆ. ಕುಟುಂಬಸ್ಥರ ಗಂಟಲು ದ್ರವದ ವರದಿ 9 ದಿನವಾದರೂ ಇನ್ನೂ ಬಂದಿಲ್ಲ. 

ಲಾಭ–ನಷ್ಟದ ಲೆಕ್ಕಾಚಾರ ಪಕ್ಕಕ್ಕಿಟ್ಟು, ಜೀವ ಉಳಿಸಿಕೊಳ್ಳುವ ಕಾಲ ಇದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮದುವೆ, ಪಾರ್ಟಿ, ಸ್ನೇಹಿತರ ಭೇಟಿ ಅಂತ ಅನಗತ್ಯವಾಗಿ ಸುತ್ತಾಡದೆ ಆದಷ್ಟು ಮನೆಯಲ್ಲೇ ಇರಬೇಕು. ಸೋಂಕಿತರಾದರೆ ಕುಟುಂಬಸ್ಥರು, ಸಂಬಂಧಿಕರು ಯಾರೂ ನಿಮ್ಮ ಹತ್ತಿರ ಬರುವುದಿಲ್ಲ. ಆರೈಕೆ, ಸಾಂತ್ವನವೂ ಸಿಗುವುದಿಲ್ಲ. ಹಾಗಾಗಿ ಅಸ್ಪೃಶ್ಯತೆ ಹುಟ್ಟಿಹಾಕುವ ಇಂಥ ಕೊರೊನಾ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು