ಶುಕ್ರವಾರ, ಜುಲೈ 30, 2021
21 °C
557 ವಿದ್ಯಾರ್ಥಿಗಳು ಗೈರು: ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ

ಸುಸೂತ್ರವಾಗಿ ನಡೆದ ಪಿಯು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ದ್ವಿತೀಯ ಪಿ.ಯು.ಸಿ. ಇಂಗ್ಲಿಷ್‌ ಭಾಷಾ ಪರೀಕ್ಷೆಯನ್ನು ಗುರುವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಮಾಣೀಕೃತ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ 13,342 ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಯಶಸ್ವಿಯಾಗಿ ಪರೀಕ್ಷೆ ಬರೆದರು. 

ಜಿಲ್ಲಾಡಳಿತ ಪರೀಕ್ಷೆಗೆ ವ್ಯಾಪಕ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ, ಪ್ರತಿ ಕೊಠಡಿಯಲ್ಲಿ ಅಂತರ ಕಾಯ್ದುಕೊಂಡು ಕೂರಲು ಆಸನ ವ್ಯವಸ್ಥೆಯ ಅವಕಾಶ ಮಾಡಿಕೊಡಲಾಗಿತ್ತು. 

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಂತರ, ಮಾಸ್ಕ್ ಧಾರಣೆ ಕುರಿತಂತೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. ನಗರದ ಜಿ.ಎಚ್. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.

ಹಾಜರಾತಿ ವಿವರ

ಇಂಗ್ಲಿಷ್‌ ಪರೀಕ್ಷೆಗೆ ಜಿಲ್ಲೆಯ 12,995 ಹಾಗೂ ಹೊರ ಜಿಲ್ಲೆಯ 904 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 13,899 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಜಿಲ್ಲೆಯ 12,448 ಹಾಗೂ ಹೊರ ಜಿಲ್ಲೆಯ 894 ವಿದ್ಯಾರ್ಥಿಗಳು ಒಳಗೊಂಡಂತೆ 13,342 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಜಿಲ್ಲೆಯ 547 ಹಾಗೂ ಹೊರ ಜಿಲ್ಲೆಯ 10 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಜಿಲ್ಲೆಯ ವಿವಿಧ 23 ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಯಾವ ವಿದ್ಯಾರ್ಥಿಯೂ ಡಿಬಾರ್ ಆಗಿರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಿರಂಜನ ಮಾಹಿತಿ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.