ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 1.67 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಜಿಲ್ಲೆಯಾದ್ಯಂತ ಪೋಲಿಯೊ ಲಸಿಕೆ ಕಾರ್ಯಕ್ರಮ ನಾಳೆ: 971 ಬೂತ್‌ಗಳ ವ್ಯವಸ್ಥೆ
Last Updated 29 ಜನವರಿ 2021, 14:05 IST
ಅಕ್ಷರ ಗಾತ್ರ

ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಡಿ ಜ.31ರಂದು ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ 1,67,117 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಲ್ಸ್ ಪೋಲಿಯೊ ಜಿಲ್ಲಾ ಮಟ್ಟದ ಎರಡನೇ ಟಾಸ್ಕ್ ಫೋರ್ಸ್ ಸಮಿತಿಯ ಪೂರ್ವ ಸಿದ್ಧತಾ ಸಭೆ ನಡೆಯಿತು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಮಾತನಾಡಿ, ‘ಕೋವಿಡ್ ಹಿನ್ನೆಲೆಯಲ್ಲಿ ಗರಿಷ್ಠ 200 ಮಕ್ಕಳಿಗೆ ಒಂದು ಬೂತ್‍ನಂತೆ ವ್ಯವಸ್ಥೆ ಮಾಡಿ ಲಸಿಕೆ ಹಾಕಬೇಕು. ರಜೆ ಎಂದು ಯಾರೂ ಕರ್ತವ್ಯದಿಂದ ವಿಮುಖವಾಗಬಾರದು. ಕರಪತ್ರಗಳನ್ನು ಮುದ್ರಿಸಿ ವಿತರಿಸಬೇಕು. ಸ್ಥಳೀಯವಾಗಿ ಪ್ರಚಾರ ಹಾಗೂ ಲಸಿಕಾದಾರರಿಗೆ ಊಟದ ವ್ಯವಸ್ಥೆ, ವಾಹನದ ವ್ಯವಸ್ಥೆ, ನಿರಂತರ ವಿದ್ಯುತ್ ವ್ಯವಸ್ಥೆ ಕೈಗೊಳ್ಳಲು ಸ್ಥಳೀಯ ಗ್ರಾಮೀಣ ಹಾಗೂ ನಗರ ಸಂಸ್ಥೆಗಳ ಮುಖ್ಯಸ್ಥರಿಗೆ, ಸಾರಿಗೆ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜ.31ರಂದು 971 ಬೂತ್‍ಗಳಲ್ಲಿ ಲಸಿಕೆ ಹಾಕಲಾಗುವುದು. 33 ಸಂಚಾರಿ ತಂಡಗಳನ್ನು ರಚಿಸಲಾಗಿದೆ. 2.16 ಲಕ್ಷ ಡೋಸ್ ಪೋಲಿಯೊ ಲಸಿಕೆ ಪೂರೈಕೆಯಾಗಿದೆ. ಮೊದಲ ದಿನ ಬೂತ್ ಮಟ್ಟದಲ್ಲಿ ಗರಿಷ್ಠ ಮಟ್ಟದ ಲಸಿಕೆ ಹಾಕಲಾಗುವುದು. ಇಲ್ಲಿ ಕೈಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲು ಫೆ.1ರಿಂದ ಮೂರು ದಿನ ಮನೆ–ಮನೆಗೆ ತೆರಳಿ ಶೇ 100ರಷ್ಟು ಮಕ್ಕಳಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1860 ವ್ಯಾಕ್ಸಿನೇಟರ್, 186 ಮೇಲುಸ್ತುವಾರಿ ಅಧಿಕಾರಿಗಳು, 1466 ಆಶಾ ಕಾರ್ಯಕರ್ತರು, 1918 ಅಂಗನವಾಡಿ ಕಾರ್ಯಕರ್ತರನ್ನು ಪೋಲಿಯೊ ಕಾರ್ಯಕ್ರಮಕ್ಕೆ ನಿಯೋಜಿಸಲಾಗುವುದು ಎಂದರು.

ಪಲ್ಸ್ ಪೋಲಿಯೊ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಡಾ.ಸಿದ್ಧಲಿಂಗಯ್ಯ ಅವರು ಪೋಲಿಯೊ ಬಗ್ಗೆ ಮಾಹಿತಿ ನೀಡಿ, ಭಾರತ ಪೋಲಿಯೊ ಮುಕ್ತ ದೇಶ ಎಂದು ಘೋಷಣೆಯಾದರೂ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಪೋಲಿಯೊ ಲಸಿಕಾ ಕಾರ್ಯಕ್ರಮದ ಅವಧಿಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದರು.

ಸಭೆಯಲ್ಲಿ ಡಿ.ಎಂ.ಡಬ್ಲ್ಯೂ ಡಾ.ದೇವರಾಜ ಎಸ್., ಡಿ.ಎಂ.ಒ ಡಾ.ಪ್ರಭಾಕರ ಕುಂದೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಡಿ.ಯು.ಡಿ.ಸಿ ಯೋಜನಾಧಿಕಾರಿ ವಿರಕ್ತಿಮಠ, ವಿವಿಧ ಇಲಾಖಾ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT