ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಗೆ ಪುನೀತ್‌ ಪ್ರೇರಣೆ: ನಟ ರಾಘವೇಂದ್ರ ರಾಜಕುಮಾರ್‌

ಮುನ್ಸಿಪಲ್‌ ಹೈಸ್ಕೂಲ್‌ ಜೀರ್ಣೋದ್ಧಾರಕ್ಕೆ ಚಾಲನೆ: ಚಿತ್ರನಟ ರಾಘವೇಂದ್ರ ರಾಜಕುಮಾರ್‌ ಅಭಿಮತ
Last Updated 12 ಮಾರ್ಚ್ 2023, 13:59 IST
ಅಕ್ಷರ ಗಾತ್ರ

ಹಾವೇರಿ: ‘ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವ ಆಸೆಯಿದೆ. ಇಂತಹ ಕಾರ್ಯಗಳಿಗೆ ಪುನೀತ್‍ ರಾಜ್‌ಕುಮಾರ್‌ ಪ್ರೇರಣೆಯಾಗಿದ್ದು, ಅವರ ಸಹೋದರನಾಗಿದ್ದು ಸಾರ್ಥಕವಾಗಿದೆ’ ಎಂದು ಚಿತ್ರನಟ ರಾಘವೇಂದ್ರ ರಾಜಕುಮಾರ್‌ ನುಡಿದರು.

ನಗರದ ಮುನ್ಸಿಪಲ್ ಹೈಸ್ಕೂಲ್‍ಗೆ ಭಾನುವಾರ ಭೇಟಿ ನೀಡಿದ ಅವರು ಮೊದಲು ಮಹಾತ್ಮ ಗಾಂಧೀಜಿ ಪುತ್ಥಳಿಗೆ ಹಾಗೂ ದಿ.ಪುನೀತ್‍ ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮುನ್ಸಿಪಲ್‌ ಹೈಸ್ಕೂಲ್‌ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶವನ್ನಿಟ್ಟುಕೊಂಡು ನಗರದ ಮುನ್ಸಿಪಲ್ ಹೈಸ್ಕೂಲ್ ಕಟ್ಟಡವನ್ನು ದತ್ತು ಪಡೆಯಲಾಗಿದೆ. ಹಾಗೂ ‘13’ ಚಿತ್ರ ತಂಡದವರು ಭಾನುವಾರ ಕಟ್ಟಡದ ಜೀರ್ಣೋದ್ಧಾರ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಶಾಲೆಗಳಲ್ಲಿಯೇ ಎಲ್ಲರ ಭವಿಷ್ಯ ಅಡಗಿದೆ. ಈ ಹಿನ್ನೆಲೆಯಲ್ಲಿ ನಾವು ಬೆಳೆಯುವ ಜೊತೆಗೆ ನಮ್ಮ ಸುತ್ತಮುತ್ತಲಿನ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.

‘ನಮ್ಮ ತಂದೆಯವರ ನಂಟು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಕೇವಲ ಸಿನಿಮಾ ಪ್ರಚಾರಕ್ಕೆ ಇಂತಹ ಕಾರ್ಯಗಳನ್ನು ಮಾಡುತ್ತಿಲ್ಲ. ಇತರರಿಗೆ ಮಾದರಿಯಾಗಬೇಕು ಎಂಬ ಕಾರಣಕ್ಕೆ ಈ ಕಾರ್ಯ ಕೈಗೊಳ್ಳಲಾಗಿದೆ. ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಸುಮಾರು 400 ಸಿನಿಮಾಗಳು ತಯಾರಾಗುತ್ತವೆ, ಇದರಲ್ಲಿ 200 ಜನರು ಇಂತಹ ಕಾರ್ಯಕ್ಕೆ ಕೈಜೋಡಿಸಿದರೆ ಶಾಲೆಗಳು ಅಭಿವೃದ್ಧಿಯಾಗುತ್ತವೆ. ನಮ್ಮ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಹೇಳಿದರು.

ಶೌಚಾಲಯ ಕೊರತೆ:

ಅನೇಕ ಭಾಗದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದು, ಶೌಚಾಲಯ ನಿರ್ಮಾಣ ಮಾಡಿಕೊಟ್ಟರೆ ಅವರಿಗೆ ಸಹಾಯವಾಗುತ್ತೆ. ಗ್ರಾಮೀಣ ಭಾಗದ ಮಕ್ಕಳಿಗೆ ಟಿಫನ್ ಬಾಕ್ಸ್, ವಾಟರ್ ಕ್ಯಾನ್ ನೀಡಿದರೆ ಹೆಚ್ಚಿನ ಆಸಕ್ತಿಯಿಂದ ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಾರೆ. ಈ ಉದ್ದೇಶದೊಂದಿಗೆ ನಮ್ಮ ಕೈಲಾದಷ್ಟು ಮಟ್ಟಿಗೆ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ ಅವರು ಮಕ್ಕಳಿಗೆ ಪುಸ್ತಕ, ಪೆನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, 13 ಚಿತ್ರದ ನಿರ್ದೇಶಕ ಕೆ.ನರೇಂದ್ರಬಾಬು, ನಿರ್ಮಾಪಕ ಕೆ. ಸಂಪತ್‍ಕುಮಾರ, ಮಂಜುನಾಥ ಗೌಡ್ರ, ಕೇಶವ ಕುಮಾರ, ಲಕ್ಷ್ಮಿ ದಿನೇಶ್, ಸಂಜಯ ಕಲಾಲ, ಎಸಿ,ಎಸ್‍ಟಿ ವಸತಿಯುತ ಕಾಲೇಜು ಪ್ರಾಚಾರ್ಯ ಡಾ.ರಮೇಶ ತೆವರಿ ಇದ್ದರು.

ಡಾ.ರಾಜಕುಮಾರ್‌ ರಂಗಮಂದಿರ ನಿರ್ಮಾಣ

ಶಾಸಕ ನೆಹರು ಓಲೇಕಾರ ಮಾತನಾಡಿ, ‘ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿ ಪಡಿಸುತ್ತಿರುವ ಸಂಕಲ್ಪ ಮಾಡಿದ್ದು ಸ್ವಾಗತಾರ್ಹ. ಇಂತಹ ಕಾರ್ಯಗಳನ್ನು ಪ್ರತಿಯೊಬ್ಬರು ಮಾದರಿಯಾಗಿ ಪಡೆದು ಸುತ್ತಮುತ್ತಲಿನ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಬೇಕು. ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ನಗರದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಡಾ.ರಾಜಕುಮಾರ್‌ ರಂಗಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈ ರಂಗಮಂದಿರದ ಮೂಲಕ ಡಾ.ರಾಜ್‌ ಅವರ ನೆನಪು ಚಿರಸ್ಮರಣಿಯವಾಗಿರಲಿದೆ’ ಎಂದು ಹೇಳಿದರು.

***

ವೃತ್ತಿಯ ಜೊತೆಗೆ ಪ್ರವೃತ್ತಿ ರೂಢಿಸಿಕೊಂಡು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿರುವ ರಾಘವೇಂದ್ರ ರಾಜಕುಮಾರ್‌ ಅವರ ಕಾರ್ಯ ಶ್ಲಾಘನೀಯ
– ಬಸವ ಶಾಂತಲಿಂಗ ಸ್ವಾಮೀಜಿ, ಹೊಸಮಠ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT