ರಫೇಲ್: 15ಕ್ಕೆ ಕಾಂಗ್ರೆಸ್ ಪ್ರತಿಭಟನೆ

7
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ

ರಫೇಲ್: 15ಕ್ಕೆ ಕಾಂಗ್ರೆಸ್ ಪ್ರತಿಭಟನೆ

Published:
Updated:

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ‘ರಫೇಲ್ ಒಪ್ಪಂದ’ದ ಮೂಲಕ ಬಹುಕೋಟಿ ಹಗರಣ ನಡೆಸಿದ್ದು, ಇದನ್ನು ಖಂಡಿಸಿ ಸೆ. 15ರಂದು ಬೆಳಿಗ್ಗೆ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್.ಸಿ. ಶಿಡೇನೂರ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವಿಮಾನಕ್ಕೆ ₹526.1 ಕೋಟಿಯಂತೆ 126 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪೈಕಿ 108 ವಿಮಾನಗಳನ್ನು ನಮ್ಮ ದೇಶದ ಸಾರ್ವಜನಿಕ ವಲಯದ ಎಚ್‌.ಎ.ಎಲ್‌.ನಲ್ಲಿ ತಯಾರು ಮಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ‘ಮೇಕ್ ಇನ್ ಇಂಡಿಯಾ’ ಘೋಷಣೆ ಮಾಡುವ ಪ್ರಧಾನಿ ಮೋದಿಎಚ್‌ಎಎಲ್ ಅನ್ನು ಒಪ್ಪಂದದಿಂದ ಕೈ ಬಿಟ್ಟಿದ್ದು, ರಿಲಾಯನ್ಸ್ ಡಿಫೆನ್ಸ್ ಎಂಬ ಸಂಸ್ಥೆಯನ್ನು ಸೇರಿಸಿದ್ದಾರೆ. ಅಲ್ಲದೇ, ಪ್ರತಿ ವಿಮಾನದ ಖರೀದಿ ದರವನ್ನು ₹1,670.7 ಕೋಟಿಗೆ ಏರಿಕೆ ಮಾಡಿದ್ದಾರೆ. ಒಟ್ಟು, 36 ವಿಮಾನಗಳ ಖರೀದಿಗೆ ಮುಂದಾಗಿದ್ದಾರೆ ಎಂದು ದೂರಿದರು.

ದೇಶದ ಸಾರ್ವಜನಿಕ ವಲಯದ ಉದ್ದಿಮೆಯಾದ ಎಚ್.ಎ.ಎಲ್‌ನಲ್ಲಿ ಕಡಿಮೆ ಬೆಲೆಯಲ್ಲಿ ವಿಮಾನ ಉತ್ಪಾದಿಸುವ ಹೊರತಾಗಿ, ಹೆಚ್ಚಿನ ದರಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೇ, ಒಪ್ಪಂದಕ್ಕಿಂತ 12 ದಿನಗಳ ಹಿಂದೆ ನೋಂದಣಿಯಾದ ಸಂಸ್ಥೆಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದರು. 

ಖರೀದಿಯ ಬೆಲೆಯನ್ನು ಬಹಿರಂಗ ಮಾಡಬಾರದು. ಇದು ರಹಸ್ಯ ಕಾಯಿದೆಗೆ ಅನ್ವಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಇದು, ಪ್ರಕರಣದ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನವಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಬಹುತೇಕ ಒಪ್ಪಂದಗಳಲ್ಲಿ ಖರೀದಿಯ ಮೌಲ್ಯವನ್ನು ತಿಳಿಸಲಾಗಿತ್ತು. ಜನರ ಹಣವನ್ನು ಖರ್ಚು ಮಾಡುವಾಗ ಸರ್ಕಾರ ಉತ್ತರದಾಯಿತ್ವ ಹೊಂದಿರಬೇಕು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಈ ಒಪ್ಪಂದದ ಪ್ರಕಾರ ಸಂಬಂಧಿತ ಸಂಸ್ಥೆಯು 2022ರೊಳಗೆ ವಿಮಾನವನ್ನು ಪೂರೈಸಿದರೆ ಸಾಕು. ಆದರೆ, ದೇಶದ ಭದ್ರತೆ ದೃಷ್ಟಿಯಿಂದ ಇಷ್ಟೊಂದು ವಿಳಂಬ ಮಾಡಿರುವುದು ತಪ್ಪು. ಅಲ್ಲದೇ, ಈ ಒಪ್ಪಂದಕ್ಕೆ ರಕ್ಷಣಾ ಸಂಪುಟ ಸಮಿತಿಯ ಪೂರ್ವ ಅನುಮೋದನೆಯನ್ನು ಪಡೆದುಕೊಂಡಿರಲಿಲ್ಲ. ಎಚ್‌.ಎ.ಎಲ್‌ ಅನ್ನು ಕೈ ಬಿಡುವ ಮೂಲಕ ದೇಶದಲ್ಲಿ ವಿಮಾನ ಉತ್ಪಾದನೆಯನ್ನು ತಪ್ಪಿಸಿದ್ದಾರೆ ಎಂದರು.

ಒಟ್ಟಾರೆ, ₹1.30 ಲಕ್ಷದ ಗುತ್ತಿಗೆಯನ್ನು ಕೇವಲ 12 ದಿನಗಳ ಕಂಪೆನಿಗೆ ನೀಡುವ ಮೂಲಕ ‘ದೇಶದ ಕಾವಲುಗಾರ’ ಎಂದು ಕರೆಯಿಸಿಕೊಳ್ಳುತ್ತಿದ್ದ ಮೋದಿ, ‘ಕಮಿಷನ್‌ ಪಾಲುದಾರರಾಗಿದ್ದಾರೆ’ಯೇ?, ‘ಆಫ್‌ಸೆಟ್‌ ಗುತ್ತಿಗೆ’ ನಡೆದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಏಕೆ  ಸುಳ್ಳು ಹೇಳಿದ್ದಾರೆ? ಎಂದು ಪ್ರಶ್ನಿಸಿದರು. ಈ ನಡುವೆಯೇ 2014ರ ಜುಲೈ 4ರಂದು ಪತ್ರ ಬರೆದಿರುವ ಯುರೋಫೈಟರ್ ಟೈಫೂನ್ ಸಂಸ್ಥೆಯು ಶೇ 20ರಷ್ಟು ಕಡಿಮೆ ದರಕ್ಕೆ ವಿಮಾನ ಪೂರೈಸುವ ಭರವಸೆ ನೀಡಿದ್ದರೂ, ಕೇಂದ್ರ ಪರಿಗಣಿಸದೇ ಹೆಚ್ಚಿನ ಹಣಕ್ಕೆ ನೀಡಿರುವುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !