ರಾಜ್ಯಕ್ಕೆ ರಾಹುಲ್ ಸಂದೇಶ: ಸಲೀಂ ಅಹ್ಮದ್

ಬುಧವಾರ, ಮಾರ್ಚ್ 27, 2019
22 °C
ಹಾವೇರಿಯಲ್ಲಿ ಕಾಂಗ್ರೆಸ್ ಪರಿವರ್ತನಾ ರ್‍ಯಾಲಿ ಕುರಿತು ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್

ರಾಜ್ಯಕ್ಕೆ ರಾಹುಲ್ ಸಂದೇಶ: ಸಲೀಂ ಅಹ್ಮದ್

Published:
Updated:
Prajavani

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಮೊದಲ ಪರಿವರ್ತನಾ ರ್‍ಯಾಲಿಯನ್ನು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್‌ 9ರಂದು ನಡೆಸಲಿದ್ದು, ರಾಜ್ಯಕ್ಕೆ ಸಂದೇಶ ನೀಡಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಹಾವೇರಿಗೆ ಬರುತ್ತಿದ್ದಾರೆ. ಭಾವಿ ಪ್ರಧಾನಿ ಹಾವೇರಿಗೆ ಬರುತ್ತಿರುವುದು ಯುವಜನತೆಯಲ್ಲಿ ಸಂತಸ ಉಂಟುಮಾಡಿದೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು. 

ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಸಭೆಯೊಂದರಲ್ಲಿ ಗುರುವಾರ ಪಾಲ್ಗೊಳ್ಳುತ್ತೇನೆ. ಆ ಬಳಿಕ ಸಮಾವೇಶದ ಅಂಗವಾಗಿ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗುವುದು ಎಂದು ತಮ್ಮ ಕಾರ್ಯಕ್ರಮವನ್ನು ವಿವರಿಸಿದರು.

2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ವಾರ್ಷಿಕ 2 ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್ ತಂದು ಖಾತೆಗೆ ಹಾಕುವುದು ಮತ್ತಿತರ ಭರವಸೆಗಳನ್ನು ಈಡೇರಿಸಿಲ್ಲ. ಪೆಟ್ರೋಲ್–ಡೀಸೆಲ್ ಸೇರಿದಂತೆ ಬೆಲೆಯೇರಿಕೆಯನ್ನೂ ತಡೆದಿಲ್ಲ.   ಅವರು ಯಾವುದೇ ಭರವಸೆಯನ್ನು ಈಡೇರಿಸದ ಕಾರಣ ಜನತೆ ಬೇಸರಗೊಂಡಿದ್ದಾರೆ ಎಂದರು.

ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದು, 23 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದ ಅವರು, ನಾನು ಚುನಾವಣೆಗೆ ಸಿದ್ಧ. ಆದರೆ, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜು, ಪ್ರಕಾಶ್‌ ಗೌಡ ಪಾಟೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !