ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ

ಸಾರ್ವತ್ರಿಕ ಚುನಾವಣೆಯಲ್ಲಿ 130 ಸ್ಥಾನ ಗೆಲ್ಲುವ ಭರವಸೆ: ಸಲೀಂ ಅಹಮದ್‌
Last Updated 1 ಆಗಸ್ಟ್ 2022, 15:42 IST
ಅಕ್ಷರ ಗಾತ್ರ

ಹಾವೇರಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆ.2 ಹಾಗೂ 3ರಂದು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಆ.2ರಂದು ಹುಬ್ಬಳ್ಳಿಯಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.2ರಂದು ಸಂಜೆ 6ಕ್ಕೆ ಹುಬ್ಬಳ್ಳಿಗೆ ಆಗಮಿಸುವರು. ರಾತ್ರಿ 8ಕ್ಕೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುವರು. ಈ ಸಭೆಯಲ್ಲಿ ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ ಸೇರಿ ಎಐಸಿಸಿ ಪದಾಧಿಕಾರಿಗಳು, ರಾಜಕೀಯ ವ್ಯವಹಾರಗಳ ಸಮಿತಿಯ 42 ಪದಾಧಿಕಾರಿಗಳು ಪಾಲ್ಗೊಳ್ಳುವರು. ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ, ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಚರ್ಚಿಸಲಾಗುವುದು ಎಂದರು.

ಆ.3ರಂದು ಬೆಳಗ್ಗೆ ಚಿತ್ರದುರ್ಗಕ್ಕೆ ತೆರಳಿ ವಿವಿಧ ಮಠಾಧೀಶರನ್ನು ಭೇಟಿ ಮಾಡುವರು. ಮಧ್ಯಾಹ್ನ 12.30ಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವದಲ್ಲಿ ಪಾಲ್ಗೊಳ್ಳುವರು ಎಂದರು.

ಚುನಾವಣೆಗೆ ಇನ್ನು ಐದಾರು ತಿಂಗಳು ಬಾಕಿಯಿರುವಾಗಲೇ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಗಳು ಸರ್ವ ಜನಾಂಗದ ಹಿತ ಕಾಪಾಡುವುದಾಗಿ ಪ್ರಮಾಣವಚನ ಸ್ವೀಕರಿಸಿ ಅದಕ್ಕೆ ತದ್ವಿವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಪಕ್ಷದಿಂದ ಈಗಾಗಲೇ ವಿಧಾನಸಭೆ ಚುನಾವಣೆ ಪೂರ್ವ 2ಹಂತ ಸಮೀಕ್ಷೆ ನಡೆಸಲಾಗಿದೆ. 150 ಸ್ಥಾನಗಳ ಗುರಿಯನ್ನು ರಾಹುಲ್ ಗಾಂಧಿಯವರು ನೀಡಿದ್ದು, ಈಗಾಗಲೇ ನಮ್ಮ ಆಂತರಿಕ ಸಮೀಕ್ಷೆಯಲ್ಲಿ 130 ಸ್ಥಾನಗಳನ್ನು ಗೆಲ್ಲುವ ಸೂಚನೆ ಸಿಕ್ಕಿದೆ. ಇನ್ನಷ್ಟು ಸಂಘಟನೆಯೊಂದಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಎಸ್.ಆರ್. ಪಾಟೀಲ, ಸೋಮಣ್ಣ ಬೇವಿನಮರದ, ಡಾ.ಪ್ರಕಾಶಗೌಡ ಪಾಟೀಲ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಹಳ್ಳಳ್ಳಿ ಇತರರು ಇದ್ದರು.

ನರಸತ್ತ ಸರ್ಕಾರ: ಸಲೀಂ ಟೀಕೆ

ಹಾವೇರಿ:ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಸರಣಿ ಹತ್ಯೆ, ಭ್ರಷ್ಟಾಚಾರಗಳ ಆರೋಪ, ಅವ್ಯವಹಾರ, ಲಂಚ ಪ್ರಕರಣ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ನರಸತ್ತ ಸರ್ಕಾರದ ಆಡಳಿತಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಕಟುವಾಗಿ ಟೀಕಿಸಿದರು.

ಸಮಾಜ ಒಡೆಯುವ ಸಂಘಟನೆಗಳನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು. ಇಂತಹ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಸೂದ್, ಪ್ರವೀಣ, ಮಹಮದ್ ಫಾಸಿಲ್ ಕೊಲೆಗಳಾಗಿವೆ. ಜನರಿಗೆ ರಕ್ಷಣೆ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮೃತರ ಪೈಕಿ ಒಬ್ಬರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಿರುವ ಸರ್ಕಾರ, ಇನ್ನಿಬ್ಬರು ಮೃತರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ, ಭೇಟಿ ಕೂಡ ನೀಡಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT