ಶನಿವಾರ, ಜೂನ್ 25, 2022
25 °C
ಕೃತಕ ಅಭಾವ ಸೃಷ್ಟಿಸುತ್ತಿರುವ ಮಾರಾಟಗಾರರು; ದುಬಾರಿ ದರ, ಕಳಪೆ ಬಿತ್ತನೆ ಬೀಜಕ್ಕೆ ಕಡಿವಾಣ ಹಾಕಲು ರೈತರ ಆಗ್ರಹ

ಮಳೆಯ ನರ್ತನ: ಗರಿಗೆದರಿದ ಕೃಷಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಭೂಮಿ ಹದಗೊಳಿಸಲು ಉಳುಮೆ ಮಾಡುತ್ತಿದ್ದಾರೆ. ರಸಗೊಬ್ಬರ ಖರೀದಿಸಲು ಮಳಿಗೆಗಳ ಮುಂದೆ ರೈತರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕಳೆದ 7 ದಿನಗಳಲ್ಲಿ (ಮೇ 14ರಿಂದ ಮೇ 20ರವರೆಗೆ) 126 ಮಿ.ಮೀ ಮಳೆಯಾಗಿದೆ. ಮೇ ತಿಂಗಳಲ್ಲಿ 40 ಮಿ.ಮೀ ಮೀಟರ್‌ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಬರೋಬ್ಬರಿ 186 ಮಿ.ಮೀ. ಅತಿವೃಷ್ಟಿಯಾಗಿದೆ. ಕೆರೆ–ಕಟ್ಟೆಗಳು ತುಂಬಿ, ರೈತನ ಮೊಗದಲ್ಲಿ ಮಂದಹಾಸ ಕಾಣುತ್ತಿದೆ. 

2022–23ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯು 3.30 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದ ಗುರಿಯನ್ನು ಹೊಂದಿದೆ. ಇದರಲ್ಲಿ 2.65 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತವಾಗಿದ್ದು, 65 ಸಾವಿರ ಹೆಕ್ಟೇರ್‌ ನೀರಾವರಿ ಭೂಮಿಯಾಗಿದೆ. ಗೋವಿನ ಜೋಳ, ಭತ್ತ, ಶೇಂಗಾ, ಹತ್ತಿ, ಸೂರ್ಯಕಾಂತಿ, ಸೋಯಾಬಿನ್‌ ಪ್ರಮುಖ ಬೆಳೆಗಳಾಗಿವೆ. 

‘ಈ ಬಾರಿ ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ 41,660 ಕ್ವಿಂಟಲ್‌ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ನಮ್ಮಲ್ಲಿ 12ರಿಂದ 15 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಗಳು 19 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದೆ. ಒಟ್ಟಾರೆ 53 ಕೇಂದ್ರಗಳನ್ನು ಬೀಜ ವಿತರಣೆಗೆ ಸಜ್ಜುಗೊಳಿಸಲಾಗಿದೆ. 660 ರಸಗೊಬ್ಬರ ಮಾರಾಟ ಮಳಿಗೆಗಳು, 183 ಸೊಸೈಟಿಗಳು ಹಾಗೂ 28 ರೈತ ಉತ್ಪಾದಕ ಕಂಪನಿಗಳ ಮೂಲಕ ರಸಗೊಬ್ಬರ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಮತ್ತು ಬಿತ್ತನೆಬೀಜಕ್ಕೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ. 

ಕಳಪೆ ಬಿತ್ತನೆ ಬೀಜದ ಆತಂಕ

ಶಿಗ್ಗಾವಿ: ‘ಕಳೆದ ವರ್ಷ ಕೆಲವು ಭಾಗದಲ್ಲಿ ಕಳಪೆ ಬೀಜ ಬಿತ್ತಿ ಕಂಗಾಲಾದ ರೈತರು, ವರ್ಷವಿಡೀ ಕೊರಗುವಂತಾಯಿತು. ಬಿತ್ತನೆ ಬೀಜ ಹುಟ್ಟದಿದ್ದರೆ, ರೈತ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ. ಈ ಕುರಿತು ಕೃಷಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ರೈತ ರುದ್ರೇಶ ಪವಾಡಿ, ಚನ್ನಪ್ಪ ಹಳವಳ್ಳಿ ಒತ್ತಾಯಿಸಿದರು. 

ರೈತರ ಬೇಡಿಕೆ ಆಧಾರದ ಮೇಲೆ ಸೋಯಾಬಿನ್‌, ಶೇಂಗಾ, ಭತ್ತದ ಬೀಜವನ್ನು ಈಗಾಗಲೆ ಸಂಗ್ರಹಿಸಲಾಗುತ್ತಿದ್ದು, ಇನ್ನು 2–3 ದಿನಗಳಲ್ಲಿ ವಿತರಿಸುತ್ತೇವೆ. ಈ ಬಾರಿ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ಸುರೇಶಬಾಬು ದಿಕ್ಷೀತ್ ಹೇಳಿದರು.

ರೈತರಿಗೆ ಗೊಬ್ಬರ ಸಿಗುತ್ತಿಲ್ಲ

ಬ್ಯಾಡಗಿ: ‘ತಾಲ್ಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬದ ಪೂರೈಕೆ ಇನ್ನೂ ಆರಂಭವಾಗಿಲ್ಲ. ಸ್ಪಿಕ್‌, ಮಂಗಳದಂತಹ ಕಂಪನಿಗಳ ರಸಗೊಬ್ಬರ ಮಾರಾಟಕ್ಕೆ ಲಭ್ಯವಿಲ್ಲ. ಹೆಚ್ಚಿನ ದರಕ್ಕೆ ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದರೂ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

‘ವಿವಿಧ ಸೊಸೈಟಿಗಳಲ್ಲಿ 541 ಟನ್‌ ಯೂರಿಯಾ, 320 ಟನ್‌ ಡಿಎಪಿ ಹಾಗೂ 440 ಟನ್‌ ಕಾಂಪ್ಲೆಕ್ಸ್‌ ಬಂದಿದ್ದು, ಈ ಪೈಕಿ 252 ಟನ್‌ ಯೂರಿಯಾ, 104 ಟನ್‌ ಡಿಎಪಿ ಹಾಗೂ 268 ಟನ್‌ ಕಾಂಪ್ಲೆಕ್ಸ್‌ ಗೊತ್ತರದ ದಾಸ್ತಾನು ಇದೆ. ಬೇಡಿಕೆ ತಕ್ಕಂತೆ ಗೊಬ್ಬರವನ್ನು ಸರ್ಕಾರ ಪೂರೈಸಲಿದೆ’ ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ಮಾಹಿತಿ ನೀಡಿದರು.

ಮಳೆ ಅಡಚಣೆ: ಕೃಷಿ ಚಟುವಟಿಕೆ ವಿಳಂಬ

ಹಾನಗಲ್: ನಿರಂತರ ಸುರಿದ ಜಿಟಿಜಿಟಿ ಮಳೆಯಿಂದ ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ವಿಳಂಬವಾಗುವ ಲಕ್ಷಣ ಗೋಚರಿಸುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 49 ಸಾವಿರ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಇದೆ. ಸುಮಾರು 16 ಸಾವಿರ ಹೆಕ್ಟೇರ್‌ ಭತ್ತ, 24 ಸಾವಿರ ಹೆಕ್ಟೇರ್‌ ಗೋವಿನಜೋಳ ಮತ್ತು ಹತ್ತಿ, ಶೇಂಗಾ, ಸೋಯಾ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆ ನಡೆಯುತ್ತದೆ.

‘ಮುಂಗಾರು ಹಂಗಾಮಿಗೆ ತಾಲ್ಲೂಕಿಗೆ ಅಗತ್ಯದ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಸೋಯಾ ಬಿತ್ತನೆ ಮೊದಲು ಆರಂಭಗೊಳ್ಳುತ್ತದೆ. 750 ಕ್ವಿಂಟಲ್‌ ಸಂಗ್ರಹವಿದೆ. ಒಂದು ವಾರದ ಒಳಗಾಗಿ ಭತ್ತ, ಗೋವಿನಜೋಳ ಬಿತ್ತನೆ ಬೀಜ ದಾಸ್ತಾನು ಪೂರ್ಣಗೊಳ್ಳಲಿದೆ’ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

ಗೊಬ್ಬರ ಮಾರಾಟ: ದರಪಟ್ಟಿ ಪ್ರಕಟಿಸಿ

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ರಸಗೊಬ್ಬರ ಬೇಡಿಕೆಗೆ ತಕ್ಕಷ್ಟು ಪೂರೈಕೆಯಿದೆ. ಸೊಸೈಟಿ, ಹಾಗೂ ಡೀಲರ್‌ಗಳಲ್ಲಿ ಎಂ.ಆರ್.ಪಿ. ದರದಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಕೃಷಿ ಇಲಾಖೆಯಿಂದ ಮೆಕ್ಕಜೋಳ, ಶೇಂಗಾ, ತೊಗರಿ, ಅಲಸಂಧಿ ಮುಂತಾದವುಗಳ ಬೀಜ ವಿತರಣೆ ಕಾರ್ಯ ಸದ್ಯದಲ್ಲಿಯೇ ಪ್ರಾರಂಭಗೊಳ್ಳುತ್ತದೆ ಎಂದು ರಟ್ಟೀಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ ಕಾತರಕಿ ತಿಳಿಸಿದರು.

‘ತಾಲ್ಲೂಕಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ರೈತರಿಗೆ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ. ರೈತರ ಅಲೆದಾಟ ತಪ್ಪುತ್ತಿಲ್ಲ. ಕಳಪೆ ಬೀಜಗಳ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಗೊಬ್ಬರ ಮಾರಾಟ ಮಾಡುವ ವರ್ತಕರು ದರಪಟ್ಟಿ ಹಾಕಬೇಕು. ಕೃಷಿ ಇಲಾಖೆಯಿಂದ ಸಾವಯವ ಗೊಬ್ಬರವನ್ನು ಸಹಾಯಧನದಡಿ ವಿತರಿಸಬೇಕು’ ಎಂದು ಉತ್ತರ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ದಿವೀಗಿಹಳ್ಳಿ ತಿಳಿಸಿದರು.

ಕಳಪೆ ಬೀಜದ ಜಾಲ ಪತ್ತೆ ಮಾಡಿ

ರಾಣೆಬೆನ್ನೂರು: ಮಾರುಕಟ್ಟೆಯಲ್ಲಿ ಕಳಪೆ ಬೀಜ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಮಾರಾಟಗಾರರು ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಅವಧಿ ಮುಗಿದ ಕ್ರಿಮಿನಾಶಕಗಳನ್ನು ಮಾರುತ್ತಿದ್ದಾರೆ. ಕೃಷಿ ಅಧಿಕಾರಿಗಳು ಕಳಪೆ ಬೀಜ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ಹಾಗೂ ಅಕ್ರಮ ದಾಸ್ತಾನು ಮಾಡಿದ್ದರಿಂದ ಕೃಷಿ ಅಧಿಕಾರಿಗಳು ದಾಳಿ ನಡೆಸಿ, 3 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

‘ಕಳಪೆ ಬೀಜ ಮಾರಾಟದಿಂದ ರೈತರು ಮೋಸ ಹೋಗಿ, ಇಳುವರಿ ಸಿಗದೆ ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಕಳಪೆ ಬೀಜ ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಒತ್ತಾಯಿಸಿದ್ದಾರೆ. 

ದುಬಾರಿ ದರದಲ್ಲಿ ಗೊಬ್ಬರ ಮಾರಾಟ

ಸವಣೂರು: ‘ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಸರ್ಕಾರದ ದರಕ್ಕಿಂತ ಪ್ರತಿ ಚೀಲಕ್ಕೆ ₹200ರಿಂದ ₹250 ಗಳವರೆಗೆ ಹೆಚ್ಚಿನ ಹಣವನ್ನು ಪಡೆದುಕೊಂಡು ರೈತರಿಗೆ ಮೊಸ ಮಾಡುತ್ತಿದ್ದರೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಗಮನವನ್ನು ಹರಿಸದೆ ಮೂಕ ಪ್ರೇಕ್ಷಕರಂತೆ ಮೌನಕ್ಕೆ ಶರಣಾಗಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಬಿ. ಸೋಮಶೇಖರಗೌಡ ಆರೋಪಿಸಿದ್ದಾರೆ.

‘ರೈತರಿಗೆ ಬಿತ್ತನೆ ಕಾರ್ಯಕ್ಕಾಗಿ ಸೋಯಾಬಿನ್ 600 ಕ್ವಿಂಟಲ್‌, ಶೇಂಗಾ 150 ಕ್ವಿಂಟಲ್, ಗೋವಿನಜೋಳ 250 ಕ್ವಿಂಟಲ್ ಪೂರೈಕೆಯಾಗಿದ್ದು, ತಾಲ್ಲೂಕಿನ 7 ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟ ಕೇಂದ್ರಗಳಲ್ಲಿ ಈಗಾಗಲೇ 445 ಟನ್ ಯೂರಿಯಾ, 530 ಟನ್ ಡಿಎಪಿ, 50 ಟನ್ ಪೊಟ್ಯಾಷ್ ರಾಸಾಯನಿಕ ಗೊಬ್ಬರ ಶೇಖರಣೆ ಮಾಡಲಾಗಿದೆ’ ಎಂದು ಕೃಷಿ ಸಹಾಯಕ ಮಂಜುನಾಥ ಕೆ.ಟಿ ಮಾಹಿತಿ ನೀಡಿದ್ದಾರೆ.

**

ಮುಂದಿನ ವಾರದಲ್ಲಿ ಬಿತ್ತನೆ ಆರಂಭವಾಗುತ್ತಿದ್ದು, ಬೀಜ, ಗೊಬ್ಬರ ವಿತರಣೆ ವಿಳಂಬವಾಗುತ್ತಿದೆ. ಕೂಡಲೇ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
- ಮುತ್ತಣ್ಣ ಗುಡಿಗೇರಿ, ಶಿಗ್ಗಾವಿ ತಾಲ್ಲೂಕು ಘಟಕದ ಅಧ್ಯಕ್ಷ, ರೈತ ಸಂಘ

**

5 ತಂಡ ರಚಿಸಿ ಎಲ್ಲ ಅಂಗಡಿಗಳ ತಪಾಸಣೆ ಮಾಡಲಾಗಿದೆ. ಕಳಪೆ ಬೀಜ ಮಾರಾಟದ ಬಗ್ಗೆ ಮಾಹಿತಿ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು
- ಎಚ್‌.ಬಿ. ಗೌಡಪ್ಪಳವರ, ಸಹಾಯಕ ಕೃಷಿ ಅಧಿಕಾರಿ, ರಾಣೆಬೆನ್ನೂರು

**

ಡಿಎಪಿ ಜೊತೆ ನ್ಯಾನೊ ಯೂರಿಯಾ ಲಿಂಕ್‌ ಮಾಡದಂತೆ ಸೂಚಿಸಿದ್ದೇನೆ. ಬಿತ್ತನೆ ನಂತರ ನ್ಯಾನೊ ಉಪಯುಕ್ತತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ
- ಬಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ, ಹಾವೇರಿ

**

ಪ್ರಜಾವಾಣಿ ತಂಡ: ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು