ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಜಮೀನಿಗೆ ನುಗ್ಗಿದ ನೀರು

Last Updated 14 ಸೆಪ್ಟೆಂಬರ್ 2020, 10:59 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಗ್ರಾಮ ಸೇರಿದಂತೆ ಸುತ್ತ, ಮುತ್ತಲಿನ ಹಳ್ಳಿಗಳಲ್ಲಿ ಕೆರೆಗಳು ತುಂಬಿವೆ. ಇಲ್ಲಿನ ಅಯ್ಯನಕೆರೆ ಹಾಗೂ ನಿಟ್ಟೂರು ಬಳಿಯ ಚೆಕ್‌ಡ್ಯಾಂ ಕೋಡಿ ಬಿದ್ದಿದ್ದು, ರೈತರ ಜಮೀನುಗಳಿಗೆ ನೀರು ನುಗ್ಗಿದೆ.

ಸೋಮವಾರ ಕೂಡ ಬೆಳಗಿನಿಂದ ಮಳೆಯಾಗುತ್ತಿದ್ದು ಕೋಡಿ ಬಿದ್ದ ಕೆರೆಗಳ ನೀರು ಹಲವೆಡೆ ರಸ್ತೆಗಳಿಗೆ ನುಗ್ಗಿದ್ದು ಜನರಿಗೆ ಓಡಾಟಕ್ಕೆ ತೊಂದರೆಯಾಗಿದೆ.

ಅಯ್ಯನಕೆರೆ ಕೋಡಿ ಬಿದ್ದಿರುವುದರಿಂದ ನೂರಾರು ಎಕರೆ ಬೆಳೆ ಹಾನಿಯಾಗಲಿದೆ. ಹೀಗಾಗಿ ಕೆರೆ ದುರಸ್ತಿ ಮಾಡಿ ರೈತರ ಬೆಳೆ ಹಾಗೂ ರಸ್ತೆ ದುರಸ್ತಿಗೆ ಕೂಡ ಕ್ರಮಕೈಗೊಳ್ಳಬೇಕು ಎಂದು ಯುವ ರೈತಮುಖಂಡ ನಾಗರಾಜ ತಿಪ್ಪಣ್ಣನವರ ಹೇಳಿದರು.

ಇಲ್ಲಿಗೆ ಸಮೀಪದ ನಿಟ್ಟೂರು ಬಳಿ ಇರುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಿದ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ. ಇದು ಅಲ್ಲಿನ ರೈತರಿಗೆ ಒಂದೆಡೆ ಸಂತಸ ನೀಡಿದರೆ, ಇನ್ನೊಂದೆಡೆ ಬೆಳೆದು ನಿಂತ ಬೆಳೆ ಹಾಳಾಗುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಯುವ ರೈತಮುಖಂಡ ರೇವಣಸಿದ್ಧಪ್ಪ ಶಿರಿಗೇರಿ ಹೇಳಿದರು.

‘ಈ ಹಿಂದೆ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಸ್ಮಶಾನಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಿದಾಗ ಕೆರೆ ಪಕ್ಕದ ರಸ್ತೆಯೂ ಸಹ ದುರಸ್ತಿ ಭಾಗ್ಯ ಕಂಡಿತ್ತು. ಇದರಿಂದ ಕೆರೆಯ ಅಕ್ಕ ಪಕ್ಕದಲ್ಲಿರುವ ರೈತರಿಗೆ ಅನುಕೂಲವಾಗಿತ್ತು. ಈಗ ಕೋಡಿ ಬಿದ್ದ ಕೆರೆಯಿಂದ ನೀರು ರಸ್ತೆ ಮೇಲೆ ಹರಿದು ರಸ್ತೆ ಹಾಳಾಗಿದೆ. ಕೆರೆ ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಎಲ್ಲ ರೈತರ ಸಹಮತವಿದೆ. ಆದರೆ ಕೆರೆ ಅಭಿವೃದ್ದಿ ನೆಪದಲ್ಲಿ ಪಕ್ಕದ ರಸ್ತೆ ಹಾಳಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ರೈತ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಮಚಂದ್ರಪ್ಪ ಶಾಮಣ್ಣನವರ ಹೇಳಿದರು.

'ಪ್ರಜಾವಾಣಿ'ಯೊಂದಿಗೆ ಪಿಡಿಒ ಅಂಬಿಕಾ ಎಂ. ಪ್ರತಿಕ್ರಿಯಿಸಿ, ಅಂತರ್ಜಲ ವೃದ್ಧಿ ಹಾಗೂ ಬೇಸಿಗೆಯಲ್ಲಿ ಜಾನುವಾರಗಳಿಗೆ ನೀರು ಸಂಗ್ರಹಿಸುವ ಉದ್ದೇಶದಿಂದ ಗ್ರಾಮ ಪಂಚಾಯ್ತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೊಳೆತ್ತಿ ಅಯ್ಯನಕೆರೆ ದುರಸ್ತಿ ಮಾಡಲಾಗಿದೆ. ಆದರೆ ಈಗ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನೀರು ಹಾಗೂ ಮಳೆ ನೀರಿನಿಂದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಿದ್ದು, ಮಳೆಯ ಕಾರಣ ಕೂಲಿಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಂಗಳವಾರ ಜೆಸಿಬಿ ಬಳಸಿಕೊಂಡು ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT