ಮಂಗಳವಾರ, ಸೆಪ್ಟೆಂಬರ್ 21, 2021
21 °C
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ವರದಾ, ಕುಮದ್ವತಿ ನದಿಗಳು: ವಿವಿಧೆಡೆ ರಸ್ತೆ ಸಂಪರ್ಕ ಕಡಿತ

ಹಾವೇರಿ: ಮಳೆ ಅಬ್ಬರ; 214 ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದ್ದು, 23 ದಿನಗಳಲ್ಲಿ ಬರೋಬ್ಬರಿ 214 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. 

ಒಬ್ಬರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮತ್ತೊಬ್ಬರು ಗೋಡೆ ಕುಸಿದು ಮೃತಪಟ್ಟಿರುವ ಪ್ರಕರಣಗಳು ಸೇರಿದಂತೆ ಇದೇ ತಿಂಗಳಲ್ಲಿ ಎರಡು ಜೀವಹಾನಿಯಾಗಿವೆ. 

ಒಂದೇ ದಿನ 84 ಮನೆಗಳಿಗೆ ಹಾನಿ
ಜುಲೈ 23ರಂದು ಒಂದೇ ದಿನ ಜಿಲ್ಲೆಯಾದ್ಯಂತ 84 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾವೇರಿ–4, ರಾಣೆಬೆನ್ನೂರು–10, ಬ್ಯಾಡಗಿ–5, ಹಿರೇಕೆರೂರು–20, ರಟ್ಟೀಹಳ್ಳಿ–2, ಸವಣೂರು–11, ಶಿಗ್ಗಾವಿ–12, ಹಾನಗಲ್‌ ತಾಲ್ಲೂಕಿನಲ್ಲಿ 20 ಮನೆಗಳು ಶಿಥಿಲವಾಗಿವೆ. 

ಜೂನ್‌ ತಿಂಗಳಲ್ಲಿ 201 ಮನೆಗಳಿಗೆ ಭಾಗಶಃ ಹಾನಿಯಾಗಿತ್ತು. ಇವುಗಳಲ್ಲಿ 85 ಮನೆಗಳ ಅರ್ಜಿಯನ್ನು ಅಂಗೀಕರಿಸಿದ್ದು, 116 ಮನೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮನೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಒಟ್ಟು ₹19 ಲಕ್ಷ ಪರಿಹಾರ ನೀಡಲಾಗಿದೆ. 

ಮನೆಗಳಿಗೆ ನುಗ್ಗಿದ ನೀರು
ಬ್ಯಾಡಗಿ ತಾಲ್ಲೂಕಿನ ಮತ್ತೂರ ಕೆರೆಯಿಂದ 6 ಮನೆಗಳಿಗೆ ಹಾಗೂ ಹಿರೇಕೆರೂರು ತಾಲ್ಲೂಕಿನ ಆರಿಕಟ್ಟಿ ಕೆರೆಯಿಂದ 2 ಮನೆಗಳಿಗೆ ನೀರು ನುಗ್ಗಿದೆ. ರಟ್ಟೀಹಳ್ಳಿ ತಾಲ್ಲೂಕಿನ ಯಲಿವಾಳ, ಸತ್ತಿಗಿಹಳ್ಳಿ, ಮಳಗಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸವಣೂರು ತಾಲ್ಲೂಕಿನಲ್ಲಿ ಕಳಸೂರಿನಿಂದ ಹಾವೇರಿಗೆ ರಸ್ತೆ ಸಂಪರ್ಕ ಜಲಾವೃತವಾಗಿದೆ.

ಹಾನಗಲ್‌ ತಾಲ್ಲೂಕಿನಲ್ಲಿ ಯತ್ತಿನಹಳ್ಳಿಯಿಂದ ಕಿರವಾಡಿ, ಕಂಚಿನೆಗಳೂರದಿಂದ ಬೆಳಗಾಲಪೇಟೆ, ಕುಂಟನಹೊಸಹಳ್ಳಿಯಿಂದ ಅಕ್ಕಿವಳ್ಳಿ, ಹರವಿಯಿಂದ ಕೂಡಲ ಮಾರ್ಗಗಳು ಜಲಾವೃತವಾಗಿ, ರಸ್ತೆ ಸಂಪರ್ಕ ಕಡಿತಗೊಂಡಿವೆ. 

ಹಸು–ಕರು ರಕ್ಷಣೆ
ಹಾನಗಲ್‌ ತಾಲ್ಲೂಕು ಹೀರೂರ ಗ್ರಾಮದಲ್ಲಿ ಧರ್ಮ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಹಸು ಮತ್ತು ಕರು ಎರಡೂ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದವು. ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ, ಹಸು ಮತ್ತು ಕರುವನ್ನು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ತಿಳಿಸಿದ್ದಾರೆ. 

141 ಗ್ರಾಮಗಳಿಗೆ ಮುಳುಗಡೆ ಭೀತಿ
ನದಿ ಪಾತ್ರಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಇರುವ 141 ಗ್ರಾಮಗಳು ಜಿಲ್ಲೆಯಲ್ಲಿ ಮುಳುಗಡೆ ಭೀತಿ ಎದುರಿಸುತ್ತಿವೆ. ಈ ಗ್ರಾಮಗಳಲ್ಲಿ 1.31 ಲಕ್ಷ ಜನಸಂಖ್ಯೆಯಿದ್ದು, ಇವರಲ್ಲಿ 2125 ಗರ್ಭಿಣಿಯರು, 2176 ಅಂಗವಿಕಲರು, 20,726 ಮಕ್ಕಳು, 71 ವಲಸಿಗರು ಇದ್ದಾರೆ. ಅಗತ್ಯಬಿದ್ದರೆ ಈ ಗ್ರಾಮಗಳ ಜನ–ಜಾನುವಾರುಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, 141 ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. 

ವಾಡಿಕೆಗಿಂತ ಹೆಚ್ಚು ಮಳೆ
ಹಾವೇರಿ ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ 119 ಮಿಲಿ ಮೀಟರ್‌ ವಾಡಿಕೆ ಮಳೆಯಾಗಬೇಕು. ಆದರೆ, 128 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ 8ರಷ್ಟು ಹೆಚ್ಚು ಮಳೆಯಾಗಿದೆ. ಜುಲೈ 1ರಿಂದ 23ರವರೆಗೆ 124 ಮಿ.ಮೀ. ವಾಡಿಕೆ ಮಳೆಗಿಂತ 145 ಮಿ.ಮೀ. ಮಳೆಯಾಗಿದ್ದು, ಶೇ 17ರಷ್ಟು ಹೆಚ್ಚುವರಿ ಮಳೆ ಸುರಿದಿದೆ. 

ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)
ಬ್ಯಾಡಗಿ–72.4, ಹಾನಗಲ್‌– 99.5, ಹಾವೇರಿ– 32.0, ಹಿರೇಕೆರೂರು– 97.1, ರಾಣೆಬೆನ್ನೂರು–39.6, ಸವಣೂರು–32.1, ಶಿಗ್ಗಾವಿ–49.2, ರಟ್ಟೀಹಳ್ಳಿ –90.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಜುಲೈ 23ರಂದು 60 ಮಿ.ಮೀ. ಮಳೆಯಾಗಿದೆ.

ಪ್ರಾಕೃತಿಕ ವಿಕೋಪ: ಸಹಾಯವಾಣಿ ವಿವರ
ಜಿಲ್ಲೆ/ತಾಲ್ಲೂಕು; ದೂರವಾಣಿ ಸಂಖ್ಯೆ

ಜಿಲ್ಲಾಧಿಕಾರಿ ಕಚೇರಿ; 08375–249102
ಹಾವೇರಿ; 08375–232445
ರಾಣೆಬೆನ್ನೂರು; 08373–260449
ಬ್ಯಾಡಗಿ; 08375–228428
ಹಿರೇಕೆರೂರು; 08376–282231
ರಟ್ಟೀಹಳ್ಳಿ; 9008692647

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು