ರಾಣೆಬೆನ್ನೂರು: ಕೆಶಿಫ್-3 ಯೋಜನೆಯ ಗದಗ -ಹೊನ್ನಾಳಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಂಡ ಸರ್ವೆ ನಂ.403/1ಅ ನೇದ್ದರ ರೈತರ ಜಮೀನುಗಳಿಗೆ ಪರಿಹಾರ ನೀಡಿಲ್ಲ ಎಂದು ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾನುವಾರ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಕೆಶಿಫ್-3 ಯೋಜನೆಯ ಗದಗ -ಹೊನ್ನಾಳಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ರಾಣೆಬೆನ್ನೂರು ಗ್ರಾಮದಲ್ಲಿ ಭೂ ಜಮೀನು ನೇರ ಖರೀದಿ/ ಭೂಸ್ವಾಧೀನ ಪಡಿಸಿಕೊಂಡ ರೈತರ ಜಮೀನುಗಳಿಗೆ ಇದು ವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಈ ಬಗ್ಗೆ ನಗರದ ಚೋಳಮರಡೇಶ್ವರ ನಗರದಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕಚೇರಿ, ಉಪ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದೇವೆ. ಹಾಗಾಗಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಭೂ ಪರಿಹಾರ ನೀಡುವವರೆಗೂ ಕಾಮಗಾರಿ ಕೈಗೊಳ್ಳಬಾರದು ಎಂದು ತಾಕೀತು ಮಾಡಿದರು.
ಗ್ರಾಮೀಣ ಪಿಎಸ್‌ಐ ಡಿ.ಎಸ್. ಸಾಳೇರ ಅವರು ರೈತರ ಸಮಸ್ಯೆ ಬಗೆ ಹರಿಯವವರೆಗೂ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಬಾರದು ಎಂದು ಸೂಚಿಸಿದ ಮೇಲೆ ರೈತರು ಪ್ರತಿಭಟನೆ ವಾಪಸ್ಸು ಪಡೆದರು.
ಕುರುವತ್ತೆಪ್ಪ ಗೋಣ್ಣೆಮ್ಮನವರ, ಮಂಜುನಾಥ ಗೋಣೆಮ್ಮನವರ, ಸಿದ್ದಪ್ಪ ಕ್ಯಾತಮ್ಮನವರ, ಪ್ರಕಾಶ ಶ್ಯಾಮನೂರ, ನವೀನ ಪಾಟೀಲ, ಅಜೇಯ ಗೋಣೆಮ್ಮನವರ, ಚೇತನ ಕುಡುಪಲಿ, ನಂದೀಶ ಹೊನ್ನಾಳಿ, ಗಣೇಶ ಹುಗ್ಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.