ಶುಕ್ರವಾರ, ಮೇ 29, 2020
27 °C
ಕೊರೊನಾ ಸೋಂಕು ತಡೆ ಹಿನ್ನೆಲೆ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿಕೆ

ಮುಂಗಡವಾಗಿ 2 ತಿಂಗಳ ಪಡಿತರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಹಾಗೂ ಸರ್ಕಾರದ ಘೋಷಣೆಯಂತೆ ಏಪ್ರಿಲ್‌ ಹಾಗೂ ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಅಂತ್ಯೋದಯ ಅನ್ನ ಯೋಜನೆ ಪ್ರತಿ ಪಡಿತರ ಚೀಟಿಗೆ ತಿಂಗಳಿಗೆ 35 ಕೆ.ಜಿಯಂತೆ ಏಪ್ರಿಲ್‌ ಮತ್ತು ಮೇ ಎರಡೂ ತಿಂಗಳು ಸೇರಿ 70 ಕೆ.ಜಿ.ಅಕ್ಕಿ ವಿತರಿಸಲಾಗುವುದು. ಆದ್ಯತಾ (ಬಿಪಿಎಲ್) ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ (ಯುನಿಟ್) ಪ್ರತಿ ತಿಂಗಳಿಗೆ ಐದು ಕೆ.ಜಿ. ಅಕ್ಕಿಯಂತೆ ಏಪ್ರಿಲ್‌ ಹಾಗೂ ಮೇ ಎರಡೂ ತಿಂಗಳೂ ಸೇರಿ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ತಿಂಗಳಿಗೆ ಎರಡು ಕೆ.ಜಿ.ಗೋಧಿಯಂತೆ ಎರಡು ತಿಂಗಳುಗಳ ನಾಲ್ಕು ಕೆ.ಜಿ. ಗೋಧಿ ವಿತರಿಸಲಾಗುವುದು ಎಂದರು. 

ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ (ಮಧ್ಯಾಹ್ನ 1-30ರಿಂದ 2.30 ಗಂಟೆವರೆಗೆ ವಿರಾಮದ ಸಮಯ) ವಿತರಿಸಲು ಸೂಚಿಸಲಾಗಿದೆ. ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ವಿತರಣೆ, ಪ್ರತಿ ಪಡಿತರ ಚೀಟಿ ಫಲಾನುಭವಿಗಳಿಗೆ ಆಧಾರ್ ಆಧಾರಿತ ಓಟಿಪಿ ಸಂಖ್ಯೆ ಮೂಲಕ ಪಡಿತರ ಆಹಾರಧಾನ್ಯವನ್ನು ವಿತರಿಸಲು, ಪಡಿತರ ವಿತರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಲು ಹಾಗೂ ಕೋವಿಡ್-19ರ ನಿಮಿತ್ತ ಎಲ್ಲ ಮುನ್ನೆಚ್ಚರಿಕೆ ಕ್ರಮ, ಅಗತ್ಯ ಸ್ವಚ್ಛತೆಗೆ ಆದ್ಯತೆ ನೀಡುವ (ಸೋಪು, ಡೆಟಾಲ್‌ ಮತ್ತು ಸ್ಯಾನಿಟೈಸರ್) ಮೂಲಕ ಪಡಿತರ ವಿತರಣೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ನೀಡುವಂತಿಲ್ಲ. ಯಾವುದೇ ಕಾರಣಕ್ಕೂ ಪ್ರತಿ ಪಡಿತರ ಚೀಟಿದಾರರಿಂದ ಸಬೂಬು ಹೇಳಿ ಇಂಟರ್‌ನೆಟ್‌ ಮತ್ತಿತರ ವೆಚ್ಚವನ್ನು ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಈ ರೀತಿಯ ದೂರುಗಳು ದಾಖಲಾದಲ್ಲಿ ಸಂಬಂಧಪಟ್ಟ ತಾಲ್ಲೂಕುಗಳ ಆಹಾರ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಬೆಲೆ ಅಂಗಡಿಕಾರರಿಂದ ಪಡಿತರ ಚೀಟಿದಾರರಿಗೆ ಯಾವುದೇ ತೊಂದರೆಯಾದಲ್ಲಿ 1967 ಟೋಲ್ ಫ್ರಿ ಸಂಖ್ಯೆಗೆ ಕರೆಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ತುರ್ತು ಅವಶ್ಯಕತೆ ಇದ್ದರೆ ಮಾತ್ರ ಪೆಟ್ರೋಲ್: ಹಾವೇರಿ: ಕೊರೊನಾ ವೈರಸ್ (ಕೋವಿಡ್-19) ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ನಿರತರಾದವರಿಗೆ ಮಾತ್ರ ಪೆಟ್ರೋಲ್ ಒದಗಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಪ್ರತ್ಯೇಕತೆ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ರಸ್ತೆಗಳಿಗಿಳಿದು ದ್ವಿಚಕ್ರವಾಹನಗಳಲ್ಲಿ ಓಡಾಡುವುದುನ್ನು ನಿರ್ಬಂಧಿಸಲು ಅಗತ್ಯ ಸೇವೆಯಲ್ಲಿ ನಿರತರಾದ ಅಧಿಕಾರಿ, ನೌಕರರ ದ್ವಿಚಕ್ರ ವಾಹನಗಳಿಗೆ ಹಾಗೂ ತುರ್ತು ಅವಶ್ಯ ಇರುವ ನಾಗರಿಕರಿಗೆ ಮಾತ್ರ ಇಂಧನ ಪೂರೈಸುವಂತೆ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು