ಮಿರ್ಚಿ–ಮಿಠಾಯಿ ವ್ಯಾಪಾರದಲ್ಲಿ ಯಶ ಕಂಡ ರತ್ನವ್ವ ಕೋತಂಬ್ರಿ

7

ಮಿರ್ಚಿ–ಮಿಠಾಯಿ ವ್ಯಾಪಾರದಲ್ಲಿ ಯಶ ಕಂಡ ರತ್ನವ್ವ ಕೋತಂಬ್ರಿ

Published:
Updated:
Deccan Herald

ರಾಣೆಬೆನ್ನೂರು: ಶಿಕ್ಷಣ ಇಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ಹೆಣ್ಣುಮಕ್ಕಳು ಆರ್ಥಿಕ ಸಂಕಷ್ಟ ಎದುರಾದರೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ, ಇಲ್ಲಿನ ರತ್ನವ್ವ ಪ್ರಕಾಶ ಕೋತಂಬ್ರಿ ವಿಭಿನ್ನವಾಗಿ ಕುಟುಂಬಕ್ಕೆ ಕಷ್ಟ ಬಂದಾಗ, ಪತಿ ಜೊತೆ ವ್ಯಾಪಾರದಲ್ಲಿ ತೊಡಗಿಸಿಕೊಂಡವರು. ಮಿಠಾಯಿ, ಬಜ್ಜಿಯ ವ್ಯಾಪಾರ ಮಾಡಿ ಯಶಸ್ವಿಯಾದವರು.

ಹೈಸ್ಕೂಲ್ ಮೆಟ್ಟಿಲು ಹತ್ತದಿದ್ದರೂ, ರತ್ನವ್ವ ಅವರು ಸ್ವಂತ ಉದ್ಯೋಗ ಮಾಡುವ ಮೂಲಕ ಉದ್ಯೋಗಸ್ಥ ಮಹಿಳೆಯರಿಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲ ಪಡೆದು ಪತಿಯ ಜೊತೆ ಮಿಠಾಯಿ ವ್ಯಾಪಾರ ಆರಂಭಿಸಿದ್ದರು. ತಳ್ಳು ಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದ ಅವರು, ಬಳಿಕ ಮಾರುತಿ ವಾಹನ ಖರೀದಿಸಿ ಮಿಠಾಯಿ, ಮಿರ್ಚಿ ವ್ಯಾಪಾರವನ್ನು ಶುರು ಮಾಡಿದ್ದಾರೆ. ಮಿರ್ಚಿ, ಮಿಠಾಯಿ ವ್ಯಾಪಾರ ಕ್ರಮೇಣ ಜನರ ಮನ ಸೆಳೆಯಲಾರಂಭಿಸಿತು.

ಮಿಠಾಯಿಗಳನ್ನು ತಯಾರಿಸಿ ನಗರದ ಚೌಡೇಶ್ವರಿ ಜಾತ್ರೆ, ಆದಿಶಕ್ತಿ, ಅಡವಿ ಆಂಜನೇಯ, ಶನೇಶ್ಚರ, ಸಾಯಿಬಾಬಾ, ಅಯ್ಯಪ್ಪ ಸ್ವಾಮಿ ಉತ್ಸವ, ಟಗರಿನ ಕಾಳಗ, ಕುಸ್ತಿ, ಹಬ್ಬ, ಕ್ರೀಡೆ, ಪುರಾಣ ಪ್ರವಚನ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಲ್ಲಿ ವ್ಯಾಪಾರ ಮಾಡಿದರು.

27 ವರ್ಷಗಳಿಂದ ಮಿರ್ಚಿ, ಮಿಠಾಯಿ ವ್ಯಾಪಾರ ಮಾಡುತ್ತ ಆರ್ಥಿಕವಾಗಿ ಸಬಲರಾಗಿ ಸಾಧನೆಯ ಹಾದಿ ಕಂಡುಕೊಂಡಿದ್ದಾರೆ.

ಇವರ ಅಜ್ಜಿ ಕೂಡಾ ವಡಿ (ವಡೆ-ಬಜ್ಜಿ) ಮಾಡುತ್ತಿದ್ದು, ವಡಿ ನೀಲಮ್ಮ ಎಂದೇ ಖ್ಯಾತಿ ಪಡೆದಿದ್ದರು. ಇವರ ಕುಟುಂಬ ಪೂರ್ವಜರ ಕಾಲದಿಂದಲೂ ಮಿಠಾಯಿ ವ್ಯಾಪಾರ ಮಾಡುತ್ತಿರುವುದು ವಿಶೇಷ.

ಬಜ್ಜಿ ವ್ಯಾಪಾರದಲ್ಲೂ ಕೂಲಿ ಆಳುಗಳ ಕೊರತೆ ಇದೆ. ಅದಕ್ಕಾಗಿ ಮಾರುತಿ ವಾಹನದಲ್ಲಿ ಎಲ್ಲ ಸಾಮಗ್ರಿಗಳನ್ನು ಕಟ್ಟಿಕೊಂಡು ಹೋಗಿ ಮಿರ್ಚಿ ಮಾಡಿ ಮಾರುತ್ತೇವೆ ಎನ್ನುತ್ತಾರೆ ರತ್ನವ್ವ ಪ್ರಕಾಶ ಕೊತಂಬ್ರಿ.

ಉಕ್ಕಡಗಾತ್ರಿ, ಬೆನಕನಕೊಂಡ, ಮೈಲಾರ, ಕುರುವತ್ತಿ, ನಂದೀಹಳ್ಳಿ ಜಾತ್ರೆಗಳಲ್ಲಿ ಅಂಗಡಿ ತೆರೆದು ಬೆಂಡು ಬೆತ್ತಾಸ, ದಾಣಿ, ಗುಳಿಗಿ, ಸೇವು, ಜಿಲೇಬಿ, ಮೈಸೂರು ಪಾಕ್, ಪೇಡೆ, ಮಿಠಾಯಿ, ಖಾರಾ, ಕೋಡಬಳೆ, ಚಕ್ಕುಲಿ, ಮಂಡಕ್ಕಿ, ಮಿರ್ಚಿ, ಮಿಠಾಯಿ ಮಾಡಿ ಮಾರಾಟ ಮಾಡುತ್ತಾರೆ. ದೀಪಾವಳಿ ಮತ್ತು ಗೌರಿ ಹುಣ್ಣಿಮೆ ಹಬ್ಬಕ್ಕೆ ಸಕ್ಕರೆ ಗೊಂಬೆ, ಆರತಿ, ದಂಡಿ, ಕೊಲುಂಬ್ರಗಳನ್ನು ಮಾಡಿ ಮಾರುತ್ತಾರೆ.

ಪತಿ ಪ್ರಕಾಶ ವ್ಯಾಪಾರದೊಂದಿಗೆ ಉತ್ತಮ ಬಾಣಸಿಗರಾಗಿದ್ದು ಮದುವೆ, ಹುಟ್ಟುಹಬ್ಬ, ಸಮಾವೇಶ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆ ಮಾಡಲು ಹೋಗುತ್ತಾರೆ. ಆರ್ಡರ್‌ ಕೊಟ್ಟರೂ ಮನೆಯಲ್ಲಿಯೇ ತಯಾರಿಸಿ ಕೇಟರಿಂಗ್‌ ಸರ್ವೀಸ್ ಮಾಡಿಕೊಡುತ್ತೇವೆ.

ಪತಿ ಪ್ರಕಾಶ ಜೊತೆಗೆ ತಳ್ಳು ಗಾಡಿಯಲ್ಲಿ ಪ್ರತಿ ದಿನ ಸುಮಾರು ₹ 6 ಸಾವಿರ ವ್ಯಾಪಾರ ಮಾಡಿ ಬದುಕನ್ನು ಕಟ್ಟಿಕೊಂಡಿದ್ದೆವೆ ಎಂದು ಹೇಳುತ್ತಾರೆ.

ಮಹಿಳೆಯರು ಮನಸ್ಸು ಮಾಡಿದರೆ, ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ರತ್ನವ್ವ (ಮೊ: 99640 63353) ಸಾಬೀತುಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !