ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ: ಸತತ 4ನೇ ದಿನವೂ ಬಂದ್

ವಾಣಿಜ್ಯ ಚಟುವಟಿಕೆಯಿಲ್ಲದೆ ಬಿಕೋ ಎನ್ನುತ್ತಿದೆ ಪಟ್ಟಣ
Last Updated 17 ಮಾರ್ಚ್ 2023, 22:05 IST
ಅಕ್ಷರ ಗಾತ್ರ

ರಟ್ಟೀಹಳ್ಳಿ (ಹಾವೇರಿ): ಪಟ್ಟಣದಲ್ಲಿ ಮಾ.14ರಂದು ಸಂಗೊಳ್ಳಿ ರಾಯಣ್ಣನ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 4ನೇ ದಿನವೂ ವಾಣಿಜ್ಯ ವ್ಯವಹಾರ ಚಟುವಟಿಕೆಗಳಿಲ್ಲದೆ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಶುಕ್ರವಾರ ನಡೆಯಬೇಕಿದ್ದ ‘ವಾರದ ಸಂತೆ’ ಕೂಡ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸ್ಥಗಿತವಾಗಿದೆ.

ಪಟ್ಟಣದಲ್ಲಿನ ಅಂಗಡಿಗಳು ತೆರೆದಿರಲಿಲ್ಲ. ನಿತ್ಯ ಹಣ್ಣು, ತರಕಾರಿ, ಗೂಡಂಗಡಿ, ನಡೆಸಿ ಜೀವನ ಸಾಗಿಸುವ ಶ್ರಮಿಕ ವರ್ಗದವರು ಸಂಕಷ್ಟ ಎದುರಿಸುವಂತಾಗಿದೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಗೆ ವ್ಯಾಪಾರ–ವಹಿವಾಟು ಮತ್ತು ಸರ್ಕಾರಿ ಕಚೇರಿ ಕೆಲಸಗಳಿಗೆ ಬರುತ್ತಿದ್ದ ಗ್ರಾಮೀಣ ಪ್ರದೇಶದ ಜನರು ಘಟನೆಯ ನಂತರ ಆತಂಕಗೊಂಡಿದ್ದು, ಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜನ ಸಂಚಾರ ವಿರಳವಾಗಿತ್ತು. ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ನಿಯೋಜಿಸಲಾಗಿದೆ. ನಗರದೆಲ್ಲೆಡೆ ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿವೆ.

25 ಆರೋಪಿಗಳಿಗೆ ಜಾಮೀನು: ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣನ ಭಾವಚಿತ್ರದ ಮೆರವಣಿಗೆ, ಬೈಕ್ ರ‍್ಯಾಲಿ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಮೂರು ಆಟೊಗಳು ಮತ್ತು ಕಾರು ಜಖಂಗೊಂಡಿದ್ದವು. ಪ್ರಾರ್ಥನಾ ಮಂದಿರ ಮತ್ತು ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆದು ಕಿಟಕಿ ಗಾಜು ಪುಡಿಪುಡಿಯಾಗಿದ್ದವು.

ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಯುವಕರ ಮೇಲೆ ಪ್ರಕರಣ ದಾಖಲಾಗಿ, ಎಲ್ಲರನ್ನೂ ಬಂಧಿಸಲಾಗಿತ್ತು. ಗುರುವಾರ ಸಂಜೆ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT