ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

617 ನೀರಿನ ಮೂಲಗಳ ಪುನಶ್ಚೇತನ

ಕೆರೆ ಹೂಳೆತ್ತುವ ಕೂಲಿಕಾರರೊಂದಿಗೆ ಶ್ರಮದಾನ: ಸಿಇಒ ಮೊಹಮ್ಮದ್‌ ರೋಶನ್‌ ಹೇಳಿಕೆ
Last Updated 5 ಮಾರ್ಚ್ 2021, 15:04 IST
ಅಕ್ಷರ ಗಾತ್ರ

ಹಾವೇರಿ: ‘ಮುಂಗಾರು ಮಳೆ ಆರಂಭವಾಗುವ ಮುನ್ನ ಜಿಲ್ಲೆಯ ಎಲ್ಲಾ ಕೆರೆಗಳು ಹಾಗೂ ಸಾಂಪ್ರದಾಯಿಕ ಜಲಮೂಲಗಳಾದ ಬಾವಿ, ಗೋಕಟ್ಟೆಗಳನ್ನು ಪುನಶ್ಚೇತನಗೊಳಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌ ಹೇಳಿದರು.

ರಾಣೆಬೆನ್ನೂರ ತಾಲ್ಲೂಕಿನ ಕಾಕೋಳ ಗ್ರಾಮದಲ್ಲಿಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ರೋಜಗಾರ್ ದಿನಾಚರಣೆ, ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಮಹಿಳಾ ಕಾಯಕೋತ್ಸವ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.

ಹಾವೇರಿ ಜಿಲ್ಲೆಯಲ್ಲಿ 617 ಸಾಂಪ್ರದಾಯಿಕ ಜಲಮೂಲಗಳನ್ನು ಗುರುತಿಸಲಾಗಿದೆ. ಪುನಶ್ಚೇತನಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಮುಂದಿನ 3–4 ತಿಂಗಳಲ್ಲಿ ಎಲ್ಲ ಜಲಮೂಲಗಳ ಅಭಿವೃದ್ಧಿ ಹಾಗೂ ಪುನಶ್ಚೇತನಗೊಳಿಸಿ ಮಳೆಗಾಲದಲ್ಲಿ ನೀರು ತುಂಬಲು ಅನುವು ಮಾಡಲಾಗುವುದು. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಜಲ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಉದ್ಯೋಗ ಖಾತ್ರಿಯಿಂದ ಕೃಷಿ ಅಭಿವೃದ್ಧಿ:

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆ ಕೇವಲ ಗ್ರಾಮದ ರಸ್ತೆ, ಗಟಾರ ನಿರ್ಮಾಣ ಮಾಡಲು ಮಾತ್ರ ಎಂದು ತಪ್ಪಾಗಿ ಭಾವಿಸಲಾಗಿದೆ. ಕೃಷಿ ಚಟುವಟಿಕೆಯ ಸಮಗ್ರ ಅಭಿವೃದ್ದಿಗೆ ಉದ್ಯೋಗ ಖಾತ್ರಿ ಬಳಕೆ ಮಾಡಿಕೊಳ್ಳಲು ರೈತರು ಮುಂದಾಗಬೇಕು ಎಂದರು.

ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ, ಬಾಳೆ ಬೆಳೆಯ ಗುಂಡಿ ತೋಡುವುದು ಒಳಗೊಂಡಂತೆ ರೇಷ್ಮೆ ತೋಟಗಾರಿಕೆ ಚಟುವಟಿಕೆಗಳಿಗೆ ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ನೆರವು ಪಡೆಯಬಹುದು ಎಂದರು.

ಪ್ರಗತಿಪರ ರೈತರಾದ ಚನ್ನಬಸಪ್ಪ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬಳಿಗಾರ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ನೋಡೆಲ್ ಅಧಿಕಾರಿ ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ನೀಡಲಾಯಿತು ಹಾಗೂ ಕಾಕೋಳ, ಛತ್ರ ಹಾಗೂ ವೆಂಕಟಪುರ ಗ್ರಾಮದ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ರಾಣೆಬೆನ್ನೂರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಕುದರಿಹಾಳ, ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಮುಖ್ಯ ಯೋಜನಾಧಿಕಾರಿಗಳಾದ ನಿರ್ಮಲಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT