ಗುರುವಾರ , ಸೆಪ್ಟೆಂಬರ್ 16, 2021
29 °C
ರೆಡ್‌ ಕ್ರಾಸ್ ದಿನಾಚರಣೆ

ದಾನಗಳಿಗೆ ಜಾತಿ–ಧರ್ಮದ ಹಂಗಿಲ್ಲ: ಸಂಜೀವಕುಮಾರ್ ನೀರಲಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಾತಿ–ಧರ್ಮಗಳನ್ನು ರಾಜಕಾರಣದಲ್ಲಿ ಬಳಸಬಹುದೇ ಹೊರತು, ರಕ್ತ, ನೇತ್ರ, ಅಂಗ, ದೇಹ ದಾನಗಳಲ್ಲಿ ಸಾಧ್ಯವಿಲ್ಲ. ಯಾವುದೇ ಪವಿತ್ರ ಕಾರ್ಯಗಳಿಗೆ ಜಾತಿ– ಧರ್ಮಗಳ ಹಂಗಿಲ್ಲ ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ನೀರಲಗಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯಭವನದಲ್ಲಿ ಬುಧವಾರ ‘ವಿಶ್ವ ರೆಡ್‌ಕ್ರಾಸ್‌ ದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ದಲ್ಲಿ ಅವರು ಮಾತನಾಡಿದರು.

ರೆಡ್‌ಕ್ರಾಸ್‌ ಸಂಸ್ಥೆಯು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸರ್ಕಾರೇತರ ಸಂಸ್ಥೆಯಾಗಿದೆ. ಜಿಲ್ಲೆಯಲ್ಲಿ ಕೆಲವು ಕಾರಣಗಳಿಂದಾಗಿ  3 ವರ್ಷಗಳ ಕಾಲ ರೆಡ್‌ಕ್ರಾಸ್‌ ಸಂಸ್ಥೆ ಕಾರ್ಯವು ಸ್ಥಗಿತಗೊಂಡಿತ್ತು. ಹಿಂದಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮರುಜೀವ ನೀಡಿದರು ಎಂದ ಅವರು, ಈ ಸಂಸ್ಥೆ ಸಾಮಾಜಿಕ ಸೇವೆ, ಬಡವರಿಗೆ ಸಹಾಯ ಹಾಗೂ ಮಾನವಿಯತೆಯ ಕಾರ್ಯ ಮಾಡುತ್ತದೆ ಎಂದರು.

ವಿಶ್ವ ರೆಡ್‌ಕ್ರಾಸ್‌ ದಿನವು ಕೇವಲ ಆಚರಣೆಗೆ ಸೀಮಿತವಾಗದೇ, ಸಂಸ್ಥೆಯನ್ನು ಬೆಳೆಸುವ ಕೆಲಸವಾಗಬೇಕು. ರಕ್ತದಾನ, ಅಂಗದಾನ, ದೇಹದಾನಕ್ಕೆ ಸ್ವಯಂ ಪ್ರೇರಿತವಾಗಿ ಬರಲು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲೀಲಾವತಿ ಮಾತನಾಡಿ, ಹಿಂದಿನ ಕಾಲದಲ್ಲಿ ಯುದ್ದ, ಭೂಕಂಪ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಜನ ಸರಿಯಾದ ಚಿಕಿತ್ಸೆ ಸಿಗದೇ ಸಾವಿಗೀಡಾಗುತ್ತಿದ್ದರು. ಅದಕ್ಕಾಗಿ ಸ್ವಿಜರ್‌ಲ್ಯಾಂಡ್‌ನ ವ್ಯಾಪಾರಿ ಹೆನ್ರಿ ಡುನೆಂಟ್‌ 1863ರಲ್ಲಿ ನೊಂದವರಿಗೆ ನೆರವಾಗಲು ‘ರೆಡ್‌ ಕ್ರಾಸ್‌’ ಸ್ಥಾಪಿಸಿದರು ಎಂದರು.

ರೆಡ್‌ಕ್ರಾಸ್‌ ಭಾರತದಲ್ಲಿ 1920ರಲ್ಲಿ ಸ್ಥಾಪನೆಯಾಗಿದ್ದು, ಉತ್ತಮ ಸೇವೆಯನ್ನು ನೀಡುತ್ತಿದೆ. ತುರ್ತು ಸಂದರ್ಭ ನಿರ್ವಹಿಸುವ ತರಬೇತಿ ಮತ್ತು ಜಾಗೃತಿಯನ್ನು ಜಿಲ್ಲೆಯ ಯುವಜನತೆಗೆ ನೀಡಬೇಕು ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಆಧುನಿಕ, ಜಾಗತೀಕರಣದ ಭರಾಟೆಯಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಯುವ ಜನಾಂಗಕ್ಕೆ ಸೇವಾ ಮನೋಭಾವನೆ ಕುರಿತು ತಿಳಿವಳಿಕೆ ನೀಡಬೇಕು ಎಂದರು

ಜಿಲ್ಲಾ ಕ್ಷಯರೋಗದ ನಿಯಂತ್ರಣಾಧಿಕಾರಿ ಡಾ.ನಿಲೇಶ, ರಕ್ತನಿಧಿ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ನಿವೃತ್ತ ತಹಶೀಲ್ದಾರ್ ಮಹ್ಮದ್‌ ಹನೀಫ್ ನದಾಫ್, ನಿವೃತ್ತ ಆರೋಗ್ಯ ನಿರೀಕ್ಷಕ ಎಫ್.ಆರ್.ನರಗುಂದ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು