ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬಂಡಾಯದ ಬಿಸಿ

7

ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬಂಡಾಯದ ಬಿಸಿ

Published:
Updated:
Deccan Herald

ಹಾವೇರಿ:  ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ 136 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆ ದಿನವಾಗಿದ್ದು, ಅಭ್ಯರ್ಥಿಗಳು ಸರದಿ ನಿಂತು ನಾಮಪತ್ರ ಸಲ್ಲಿಸಿದರು. 

ಪ್ರಮುಖ ಅಭ್ಯರ್ಥಿಗಳು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್, ಕೆಪಿಜೆಪಿ ಮತ್ತಿತರ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದರೆ, ಟಿಕೆಟ್‌ ವಂಚಿತರು ಬಂಡಾಯವೆದ್ದಿದ್ದು, ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಆ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆ.23ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

ನಾಮಪತ್ರ ಸಲ್ಲಿಕೆಗೆ ಶನಿವಾರ ಬೆಳಿಗ್ಗೆಯೇ ದಟ್ಟಣೆ ಇತ್ತು. ಹೀಗಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ವಾರು ನಾಮಪತ್ರ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸವಣೂರಿನಲ್ಲಿ ಕೊನೆ ಕ್ಷಣದಲ್ಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ದೌಡಾಯಿಸಿದ ಕಾರಣ ಪ್ರಕ್ರಿಯೆ ಮುಂದುವರಿದಿತ್ತು.

ಮೀಸಲಾತಿಯ ಪರಿಣಾಮ ಹಲವು ಹಾಲಿ ಸದಸ್ಯರು ತಮ್ಮ ವಾರ್ಡ್‌ಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಕೆಲವರು ಪಕ್ಕದ ವಾರ್ಡ್‌ನಿಂದ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರೆ, ಇನ್ನೂ ಹಲವರು ಪತ್ನಿ, ಸಹೋದರಿ, ಸಂಬಂಧಿಕರನ್ನು ಕಣಕ್ಕೆ ಇಳಿಸಿದ್ದಾರೆ. ಉಳಿದಂತೆ ಕೆಲವರು ಬಂಡಾಯವೆದ್ದಿದ್ದು, ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಈ ಪೈಕಿ ಹಾವೇರಿ ನಗರಸಭೆಯಲ್ಲಿ ಬಂಡಾಯ ಜೋರಾಗಿದೆ.

ನಾಮಪತ್ರ ಸಲ್ಲಿಕೆಯ ಪೂರ್ವದಲ್ಲಿ ಅಭ್ಯರ್ಥಿಗಳಿಂದ ಆಯಾ ಸ್ಥಳೀಯಾಡಳಿತ ಸಂಸ್ಥೆಗೆ ಯಾವುದೇ ಶುಲ್ಕ ಬಾಕಿ ಇರಬಾರದು. ಅದಕ್ಕಾಗಿ ಕೆಲವು ಆಕಾಂಕ್ಷಿಗಳು ಕಳೆದೆರಡು ದಿನಗಳಲ್ಲಿ ಬಾಕಿ ಬಿಲ್‌ಗಳನ್ನು ತುಂಬಿದ್ದಾರೆ. ಹೀಗಾಗಿ, ಸ್ಥಳೀಯಾಡಳಿತ ಸಂಸ್ಥೆಗಳ ಬೊಕ್ಕಸಕ್ಕೂ ಆದಾಯವಾಗಿದೆ. 

ಸವಣೂರಿನಲ್ಲಿ ಹಾಲಿ ಸದಸ್ಯೆ ಬಿಜೆಪಿಯ ರಾಜೇಶ್ವರಿ ಭೂಶೆಟ್ಟಿ ಹಾಗೂ ಕಾಂಗ್ರೆಸ್‌ನ ಮಂಜುನಾಥ ಉಪ್ಪಿನ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಹಿರೇಕೆರೂರಿನಲ್ಲಿ ಕೆಜೆಪಿಯ ಗೀತಾ ದಂಡಿಗೆಹಳ್ಳಿ ಮತ್ತಿಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಸಂಜೀವಕುಮಾರ್ ನೀರಲಗಿ (ಕಾಂಗ್ರೆಸ್) ಹಾಗೂ ಗಿರೀಶ್ ತುಪ್ಪದ (ಬಿಜೆಪಿ) ಕಣಕ್ಕೆ ಇಳಿದಿದ್ದಾರೆ. ನೀರಲಗಿ ಹಾಲಿ ಸದಸ್ಯರೂ ಆಗಿದ್ದಾರೆ. ಹಾವೇರಿ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಐ.ಯು.ಪಠಾಣ್ ಹಾಗೂ ಗಣೇಶ ಬಿಷ್ಟಣ್ಣನವರ ಕಾಂಗ್ರೆಸ್‌ನಿಂದ ಹಾಗೂ ಉಪಾಧ್ಯಕ್ಷರಾದ ಇರ್ಫಾನ್ ಪಠಾಣ್ ಮತ್ತು ಲಲಿತಾ ಗುಂಡೇನಹಳ್ಳಿ ಬಿಜೆಪಿಯಿಂದ ಪರೀಕ್ಷೆಗೆ ಇಳಿದಿದ್ದಾರೆ. 

ಒಟ್ಟಾರೆ, ಚುನಾವಣಾ ಕಣವು ರಂಗೇರಿದ್ದು, ಪ್ರತಿಸ್ಪರ್ಧಿಗಳನ್ನು ಕಣದಿಂದ ಹಿಂದಕ್ಕೆ ಸರಿಯುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಇದು, ಸೋಮವಾರದ ಬಳಿಕ ತೀವ್ರಗೊಳ್ಳುವ ನಿರೀಕ್ಷೆ ಇದೆ. ಬಿಜೆಪಿಯು ಈಗಾಗಲೇ ಮಾತುಕತೆಗೆ ಸಿದ್ಧತೆ ನಡೆಸಿದೆ. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !