ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಸೌಲಭ್ಯ ನೀಡಲು ಮನವಿ

Last Updated 4 ಡಿಸೆಂಬರ್ 2020, 13:52 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದ ಅನುದಾನಿತ ಶಾಲಾ–ಕಾಲೇಜುಗಳ ನೌಕರರಿಗೆ ಜ.4ರೊಳಗೆ ಪಿಂಚಣಿ ಸೌಲಭ್ಯ ದೊರಕಿಸಿಕೊಡಬೇಕು ಎಂದು ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಏಪ್ರಿಲ್‌ 1, 2006ರಿಂದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಾಗಲಿ ಅಥವಾ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ ಸೌಲಭ್ಯವಾಗಲಿ ಸಿಕ್ಕಿಲ್ಲ.ಆದರೆ 2006 ಏಪ್ರಿಲ್‌ 1ಕ್ಕೂ ಮುನ್ನ ಪಿಂಚಣಿ ವಿಚಾರದಲ್ಲಿ ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯ ಇರಲಿಲ್ಲ. ಈಗಾಗಲೇ ಸಾವಿರಾರು ನೌಕರರು ಕೊನೇ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತರಾಗಿದ್ದಾರೆ ಮತ್ತು ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅನ್ಯಾಯವನ್ನು ಸರಿಪಡಿಸುವಂತೆ 10 ವರ್ಷಗಳಿಂದ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಬೇಡಿಕೆ ಈಡೇರಿರುವುದಿಲ್ಲ. ಇದರಿಂದ ಮನನೊಂದು ಇದೇ ಚಳಿಗಾಲದ ಅಧಿವೇಶನದ ಸಂದರ್ಭ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಂಘಟನೆ ತೀರ್ಮಾನಿಸಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಗ್ರ ಹೋರಾಟವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಜ.4, 2021ರೊಳಗೆ ಬೇಡಿಕೆ ಈಡೇರದಿದ್ದರೆ, ಮಾಡು ಇಲ್ಲವೇ ಮಡಿ ಹೋರಾಟದ ತೀರ್ಮಾನ ತೆಗೆದುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನೌಕರರು ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಘಟಕದ ಅಧ್ಯಕ್ಷ ಜಿ. ಹನುಮಂತಪ್ಪ, ರಾಜ್ಯ ಖಜಾಂಚಿ ಬಿ.ಜಿ ಕೊರಗ, ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಜಿಗಳಿ, ಸಹ ಸಂಚಾಲಕ ಎಂ.ಎಸ್ ಬತ್ತದ, ಗೌರವಾಧ್ಯಕ್ಷರಾದ ಎಫ್.ಹೆಚ್ ಕೊರವರ, ಡಿ.ಆರ್. ಬಣಕಾರ, ಎಸ್.ಎಸ್. ರಾಮನಗೌಡರ, ಜಾವೇದ್ ಅಂಗಡಿ, ಆರ್.ಎಫ್ ತೌಡೂರ, ಮಾಲತೇಶ ಅಜ್ಜೇವಡಿಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT