ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿದ ಹಾವೇರಿ ರೈಲು ನಿಲ್ದಾಣದಲ್ಲಿ ‘ವಂದೇ ಭಾರತ್’ ರೈಲು ನಿಲುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಆದಿಜಾಂಬವ ಸಂಘದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಗುರು ಗೋವಿಂದ ಭಟ್ಟರು, ಕನಕದಾಸರು, ವರಕವಿ ಸರ್ವಜ್ಞ ಹಾಗೂ ಅನೇಕ ಸಾಧು- ಸಂತರಿಗೆ ಜನ್ಮ ನೀಡಿದ ಹಾವೇರಿ ಜಿಲ್ಲೆ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಜಿಲ್ಲೆಯಿಂದ ನಿತ್ಯ ಸಾವಿರಾರು ಪ್ರಯಾಣಿಕರು ದೂರದ ಬೆಂಗಳೂರು ಸೇರಿದಂತೆ ವಿವಿಧ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಾವೇರಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಹಾವೇರಿಗೆ ಬರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ವಂದೇ ಭಾರತ್ ರೈಲು ನಿಲುಗಡೆ ಮಾಡಬೇಕು ಎಂದು ಕೋರಿದ್ದಾರೆ.
ಅಖಿಲ ಕರ್ನಾಟಕ ಆದಿಜಾಂಬವ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ, ಪ್ರಮುಖರಾದ ಮಂಜುನಾಥ ಮಡಿವಾಳ, ಮಂಜುನಾಥ ತಾಂಡೂರ್, ಶಿವಬಸವ ಚೌಶೆಟ್ಟಿ, ಶ್ರೀಕಾಂತ್ ಗಡ್ಡಿ, ಸಚಿನ್ ಮರೆಣ್ಣವರ್, ನವೀನ್ ಮಲಗೋಡ, ನಿರಂಜನ್ ಬಳೆಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.