ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನರಹಿತ ಶಾಲೆಗಳ ಅಸ್ತಿತ್ವ ಉಳಿಸಿ: ಜಿಲ್ಲಾಧಿಕಾರಿಗೆ ಮನವಿ

Last Updated 28 ಡಿಸೆಂಬರ್ 2020, 16:16 IST
ಅಕ್ಷರ ಗಾತ್ರ

ಹಾವೇರಿ:ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮಾರಕವಾಗುವ ರೀತಿಯಲ್ಲಿ ಹೊರಡಿಸುತ್ತಿರುವ ಸುತ್ತೋಲೆ ಹಾಗೂ ಮಲತಾಯಿ ಧೋರಣೆ ಖಂಡಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರೂಪ್ಸಾ) ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳ ಸೇವೆ ಅಪಾರವಾಗಿದೆ. ಕಳೆದ 10 ತಿಂಗಳಿಂದ ಕೊರೊನಾ ಸೋಂಕಿನಿಂದ ಖಾಸಗಿ ಶಾಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಲವಾರು ವರ್ಷಗಳಿಂದ ಶಾಲೆಗಳನ್ನು ನಡೆಸುತ್ತಾ ಬಂದಿದ್ದರೂ, ಬಜೆಟ್‌ ಶಾಲೆಗಳು ಯಾವುದೇ ಸ್ಥಿರ ನಿಧಿಯನ್ನು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಅತಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿವೆ. ಇಂಥ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ಅಸ್ತಿತ್ವವನ್ನೇ ಕಸಿದುಕೊಳ್ಳುವಂತಹ ಸುತ್ತೋಲೆ ಹೊರಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಾವಿರಾರು ಖಾಸಗಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ನಮ್ಮ 15 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಈ ಬಗ್ಗೆ ಸಚಿವರ ಚರ್ಚೆ ನಡೆಸಬೇಕು. ಸರ್ಕಾರದಿಂದ ಸಹಾಯಧನವಾಗಿ ಒಂದು ಸಾವಿರ ಕೋಟಿಯನ್ನು ಬಿಡುಗಡೆ ಮಾಡಬೇಕು. ಬ್ಯಾಂಕ್‌ಗಳಿಗೆ ಕನಿಷ್ಠ ಒಂದು ವರ್ಷದವರೆಗೆ ಸಾಲದ ಕಂತನ್ನು ಮುಂದೂಡಲು ಸೂಚಿಸಬೇಕು. 1995ರಿಂದ 2010ರವರೆಗೆ ಪ್ರಾರಂಭಿಸಿದ ಅನುದಾನರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಗುರುಲಿಂಗಪ್ಪಗೌಡ್ರು, ಬಸವರಾಜ ತೋಟಗೇರ, ರಾಜೀವ ಮಾಗಾವಿ, ಮಲ್ಲೇಶಪ್ಪ ದೇಶಗತ್ತಿ, ಈರನಗೌಡ ದೊಡ್ಡಗೌಡ್ರ, ಸಿ.ಎಸ್. ಮರೋಳ, ರಾಘವೇಂದ್ರ ಬೇವಿನಮರದ, ಮಹೇಶ ಪಾಟೀಲ, ಮಹೇಶ ಹಿರೇಮಠ, ನಾಗರಾಜ ಅಂತರವಳ್ಳಿ, ಬಸವರಾಜ ಅಂಗಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT