ಶನಿವಾರ, ಅಕ್ಟೋಬರ್ 1, 2022
23 °C
ಗಿಡ-ಗಂಟೆಗಳನ್ನು ಹಿಡಿದು ರಾತ್ರಿಕಳೆದ ವ್ಯಕ್ತಿ

ಕುಮುದ್ವತಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ಕಾಲುಜಾರಿ ಕುಮುದ್ವತಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ಶನಿವಾರ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ತಾಲ್ಲೂಕಿನ ಹಿರೇಮೊರಬ ಗ್ರಾಮದ ಹಾಲಪ್ಪ ಗುಡ್ಡಪ್ಪ ಕೆಳಗಿನಮನಿ (50) ಶುಕ್ರವಾರ ಸಂಜೆ ತಾಲ್ಲೂಕಿನ ಹಿರೇಮಾದಾಪುರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಹತ್ತಿರದ ನದಿಗೆ ಕಾಲು ತೊಳೆದುಕೊಳ್ಳಲು ಹೋದಾಗ ಜಾರಿ ನದಿಗೆ ಬಿದಿದ್ದಾರೆ. ರಭಸದಿಂದ ಹರಿಯುತ್ತಿರುವ ನದಿಯಲ್ಲಿ ಸುಮಾರು 1 ಕಿ.ಮೀ ದೂರದಷ್ಟು ಕೊಚ್ಚಿಕೊಂಡು ಹೋಗಿ ಯಡಗೋಡ ಗ್ರಾಮದ ಬಳಿ ನದಿ ನಡುಗಡ್ಡೆಯಲ್ಲಿ ಗಿಡಗಂಟೆ ಹಿಡಿದು ನಿಂತಿದ್ದರು.

ರಾತ್ರಿಯಲ್ಲಾ ನದಿಯಲ್ಲಿಯೇ ಕಳೆದಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಡಗೋಡ ಗ್ರಾಮದ ರೈತ ಸಿದ್ದನಗೌಡ ಚನ್ನಪ್ಪನವರ ತಮ್ಮ ಜಮೀನಿಗೆ ಬಂದಾಗ ನದಿಯಲ್ಲಿ ಸಿಕ್ಕಿಕೊಂಡ ಹಾಲಪ್ಪ ರಕ್ಷಣೆಗಾಗಿ ಕೂಗಿದ್ದಾರೆ. ಕೂಗಾಟ ಕೇಳಿದ ರೈತ ತಕ್ಷಣ ಹೊಲದಿಂದ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ನದಿಯಲ್ಲಿದ್ದ ವ್ಯಕ್ತಿ ತನ್ನ ಗ್ರಾಮದ ಹೆಸರು ಮತ್ತು ತನ್ನ ಹೆಸರನ್ನು ಕೂಗಿ ಹೇಳಿದ್ದಾನೆ. ಆಗ ಜನರು ಪೊಲೀಸರಿಗೆ ಮತ್ತು ಹಿರೇಮೊರಬ ಗ್ರಾಮಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ರಟ್ಟೀಹಳ್ಳಿ ಪಿ.ಎಸ್.ಐ ಕೃಷ್ಣಪ್ಪ ತೋಪಿನ ಹಾಗೂ ತಹಶೀಲ್ದಾರ್‌ ಅರುಣಕುಮಾರ ಕಾರಗಿ ಅವರು ಸ್ಥಳೀಯ ಮೀನುಗಾರರ ಫಕ್ಕೀರಸಾಬ ಮೇಗಳಮನಿ ಹಾಗೂ ರಮೇಶ ನಾಯ್ಕರ ಸಹಾಯ ಪಡೆದು ತೆಪ್ಪದ ಮೂಲಕ ನಡುಗಡ್ಡೆಯಲ್ಲಿದ್ದ ವ್ಯಕ್ತಿಯನ್ನು ರಕ್ಸಣೆ ಮಾಡಿದ್ದಾರೆ.

ಹಾಲಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿಯಿಂದ ಆಹಾರವಿಲ್ಲದೇ ಅಸ್ವಸ್ಥರಾಗಿದ್ದ  ಅವರನ್ನು ತಕ್ಷಣ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು