ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿ ಗೀತೆಗಳೇ ಬಂಡಾಯ ಸಾಹಿತ್ಯದ ಅಸ್ತ್ರ: ಸಾಹಿತಿ ಸತೀಶ ಕುಲಕರ್ಣಿ

‘ಬಂಡಾಯ ನಲವತ್ತು ನಾಲ್ಕು’ ಕವಿಗೋಷ್ಠಿ: ಸಾಹಿತಿ ಸತೀಶ ಕುಲಕರ್ಣಿ ಅಭಿಮತ
Last Updated 12 ಮಾರ್ಚ್ 2023, 15:17 IST
ಅಕ್ಷರ ಗಾತ್ರ

ಹಾವೇರಿ: ‘ಸಮಾಜದ ಎಲ್ಲ ತಾರತಮ್ಯಗಳಿಗೆ ಪ್ರತಿರೋಧದ ದನಿ ಹುಟ್ಟು ಹಾಕಿದ ಬಂಡಾಯ ಸಾಹಿತ್ಯ ಸಂಘಟನೆಯ 44ನೇ ವರ್ಷದ ಸ್ಥಾಪನಾ ದಿನವನ್ನು ಬಂಡಾಯದ ಪ್ರಮುಖ ಕವಿಗಳ ಮಾದರಿ ಪದ್ಯಗಳನ್ನು ಓದುವ ‘ಬಂಡಾಯ ನಲವತ್ತು ನಾಲ್ಕು’ ಎಂಬ ಕವಿಗೋಷ್ಠಿ ಇಲ್ಲಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆಯಿತು.

ನಾಲ್ಕು ದಶಕಗಳ ಹಿಂದೆ ಸೈದ್ಧಾಂತಿಕ ಸ್ಪಷ್ಟತೆಯನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರಿನಲ್ಲಿ ಜರುಗಿದಾಗಿನ ಮೊದಲ ಸಮ್ಮೇಳನದ ನೆನಪುಗಳನ್ನು ಹಂಚಿಕೊಳ್ಳುತ್ತ ಹಿರಿಯ ಬಂಡಾಯ ಲೇಖಕ ಸತೀಶ ಕುಲಕರ್ಣಿ ಕವಿಗೋಷ್ಠಿಗೆ ಚಾಲನೆಯನ್ನು ನೀಡಿದರು.

ಪ್ರಜಾಪ್ರಭುತ್ವದ ರೀತಿಯಲ್ಲಿ ಬೇರೆಯವರ ಮಾತುಗಳನ್ನು ಕೇಳುವುದು ಮತ್ತು ಸಂಯಮದಿಂದ ನಮ್ಮ ಮಾತುಗಳನ್ನು ಹೇಳುವುದನ್ನು ಬಂಡಾಯ ಕಲಿಸಿ ಕೊಟ್ಟಿದೆ. ಜಾತಿಯ ಮಿತಿಗಳ ದಾಟಿ ಸಾಮಾಜಿಕ ಸಾಮರಸ್ಯಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದ್ದು, ಹೊಡಿಬಡಿ ಅಂದರೆ ಬಂಡಾಯವಲ್ಲ, ಎಲ್ಲ ತಾರತಮ್ಯಗಳನ್ನು ಎದುರಿಸಿ ಮಾನಸಿಕ ಸಿದ್ಧತಾ ಕ್ರಮಗಳನ್ನು ರೂಢಿಸುವುದೇ ಬಂಡಾಯ. ಕ್ರಾಂತಿ ಗೀತೆಗಳೇ ಬಂಡಾಯ ಸಾಹಿತ್ಯದ ಪ್ರಮುಖ ಅಸ್ತ್ರಗಳು ಎಂದರು.

ಅಧ್ಯಕ್ಷತೆಯನ್ನು ಹಿರಿಯ ಕವಿ ಹುಬ್ಬಳ್ಳಿಯ ಸಿ.ಎಂ. ಚನ್ನಬಸಪ್ಪ, ಬಂಡಾಯ ಎಂಬುದು ಮನುಷ್ಯನ ಮೂಲ ಪ್ರವೃತ್ತಿ. ಅನ್ಯಾಯವಾದಾಗ ಪ್ರತಿ ಮನುಷ್ಯನಲ್ಲಿ ಬಂಡಾಯಗಾರನಿರುತ್ತಾನೆ. ಸಾಮಾಜಿಕ ನ್ಯಾಯಕ್ಕಾಗಿ ಅಕ್ಷರ ಮತ್ತು ಕ್ರಿಯೆಗಳೇ ಬಂಡಾಯದ ಧೋರಣೆಗಳು ಎಂದರು.

ಪತ್ರಕರ್ತ ಮಾಲತೇಶ ಅಂಗೂರ, ‘ಸುತ್ತಲೂ ಅನೇಕ ಸಾಮಾಜಿಕ ಕ್ರೌರ್ಯಗಳು ಜರುಗುತ್ತಿವೆ. ವಿಶೇಷವಾಗಿ ದಲಿತರ ಮೇಲೆ ಆಗುವ ದೌರ್ಜನ್ಯಗಳು ನಡೆಯುತ್ತಿದ್ದರೂ, ಪ್ರಜ್ಞಾವಂತರು ಮೌನ ವಹಿಸುತ್ತಿದ್ದಾರೆ. ಇದಕ್ಕೆ ಬಂಡಾಯ ಸಾಹಿತ್ಯವೇ ಬಾಯಿ ಕೊಡಬೇಕು’ ಎಂದರು.

ಆರಂಭದಲ್ಲಿ ಕೆ.ಆರ್. ಹಿರೇಮಠ, ಎ.ಬಿ. ಗುಡ್ಡಳ್ಳಿ, ಮಹಾಂತೇಶ ಮನರಿಗೂಳಪ್ಪನವರ ಮುಂತಾದವರು ಕ್ರಾಂತಿಗೀತೆಗಳನ್ನು ಹಾಡಿದರು. ಎಸ್.ಆರ್. ಹಿರೇಮಠ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರೆ, ಪೃಥ್ವಿರಾಜ ಬೆಟಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT