ಪುಂಡರಿಗೆ ಭಯ, ಮಹಿಳೆಯರಿಗೆ ‘ನಿರ್ಭಯ’: ಐಜಿಪಿ ಬಿ. ದಯಾನಂದ

7
ವಿಶೇಷ ಮಹಿಳಾ ಪೊಲೀಸ್ ಪಡೆಗೆ ಚಾಲನೆ

ಪುಂಡರಿಗೆ ಭಯ, ಮಹಿಳೆಯರಿಗೆ ‘ನಿರ್ಭಯ’: ಐಜಿಪಿ ಬಿ. ದಯಾನಂದ

Published:
Updated:
Deccan Herald

ಹಾವೇರಿ: ಪುಂಡಪೋಕರಿಗಳು ಭಯಭೀತರಾಗಿ ಓಡುವ ಹಾಗೂ ಹೆಣ್ಣುಮಕ್ಕಳು ಭಯ ರಹಿತವಾಗಿ ಸಂಚರಿಸುವ ವಾತಾವರಣವನ್ನು ‘ನಿರ್ಭಯ’ ನಿರ್ಮಿಸಬೇಕು ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ. ದಯಾನಂದ ಹೇಳಿದರು. 

ನಗರದಲ್ಲಿ ಶುಕ್ರವಾರ ಪೊಲೀಸ್‌ ಇಲಾಖೆ ಆಯೋಜಿಸಿದ ‘ನಾಗರಿಕರ ಬಂದೂಕು ತರಬೇತಿ’ ಕಾರ್ಯಕ್ರಮದ ಸಮಾರೋಪ ಹಾಗೂ ‘ನಿರ್ಭಯ’ ವಿಶೇಷ ಮಹಿಳಾ ಪೊಲೀಸ್ ಪಡೆಗೆ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಮಹಿಳಾ ಪಡೆಗಳು ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯ ‘ಅಭಯ’ ಗಸ್ತುವಾಹನ, ಮೈಸೂರಿನಲ್ಲಿ ‘ಚಾಮುಂಡಿ’ ಹಾಗೂ ಇನ್ನೂ ಕೆಲವೆಡೆ ‘ಚೆನ್ನಮ್ಮ’ ಹೆಸರಿನಲ್ಲಿ ತಂಡಗಳಿವೆ. ಜಿಲ್ಲೆಯಲ್ಲೂ ‘ನಿರ್ಭಯ’ ತಂಡ ಪ್ರಾರಂಭಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

‘ಈ ವಿಶೇಷ ಪಡೆಗಳು ಬಸ್ ನಿಲ್ದಾಣ, ಸಂತೆ, ಜಾತ್ರೆ ಹಾಗೂ ಶಾಲಾ-ಕಾಲೇಜು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ, ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವವರನ್ನು ಗುರುತಿಸಿ, ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ’ ಎಂದು ಹೇಳಿದರು.

ಈಗ ತರಬೇತಿಯನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗಸ್ತು ವಾಹನ ನೀಡಲಾಗುವುದು ಎಂದ ಅವರು, ಪ್ರಾಯೋಗಿಕ ಅನುಭವಗಳನ್ನು ಎಸ್ಪಿ ಜೊತೆ ಹಂಚಿಕೊಂಡರೆ, ಇಲಾಖೆಯಿಂದ ಹೆಚ್ಚಿನ ತರಬೇತಿ, ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.

ಸೇನೆ, ಪೊಲೀಸ್, ಶೂಟಿಂಗ್ ಸ್ಪೋರ್ಟ್ಸ್‌ಗೆ ಸೀಮಿತವಾಗಿದ್ದ ಬಂದೂಕು ತರಬೇತಿಯನ್ನು ಈಗ ನಾಗರಿಕರಿಗೂ ನೀಡಲಾಗುತ್ತಿದೆ. ಆಯುಧಗಳ ಮಾಹಿತಿಯನ್ನು ಹೊಂದಿದ್ದರೆ, ಅವಘಡ ಕಡಿಮೆ ಮಾಡಲು ಸಾಧ್ಯ. ಆದ್ದರಿಂದ ನಾಗರಿಕರೂ ಬಂದೂಕಿನ ಕುರಿತು ಮಾಹಿತಿ ಹೊಂದಿರಬೇಕು ಎಂದರು.

ನಾಗರಿಕ ಬಂದೂಕು ತರಬೇತಿಯಿಂದ ಪೊಲೀಸ್ ಹಾಗೂ ನಾಗರಿಕರ ಮಧ್ಯೆ ಬಾಂಧವ್ಯ ವೃದ್ಧಿಸುತ್ತದೆ. ತರಬೇತಿ ಪಡೆದ ನಾಗರಿಕರು, ಅಗತ್ಯ ಸಂದರ್ಭದಲ್ಲಿ ಪೊಲೀಸರ ಜೊತೆ ಕಾರ್ಯನಿರ್ವಹಿಸಲು ಸಾಧ್ಯ ಎಂದರು.

ಎಸ್ಪಿ ಕೆ. ಪರಶುರಾಂ ಮಾರ್ಗದರ್ಶನದಲ್ಲಿ ಆರ್‌ಪಿಐ ಮಾರುತಿ ಹೆಗಡೆ, ಸಿಬ್ಬಂದಿ ಆರ್.ಜೆ. ದೊಡ್ಮನಿ, ಡಿ.ಎಸ್. ಜಗತಾಪ, ಎಸ್.ಎಸ್.ಆರಳಿ, ಬಿ.ಸಿ. ವಡೇರಹಳ್ಳಿ, ಮಂಜುನಾಥ.ಎಸ್. ಕಟಗಿ ನಾಗರಿಕರಿಗೆ ಬಂದೂಕು ತರಬೇತಿ ನೀಡಿದ್ದರು. 

ನಾಗರಿಕ ಬಂದೂಕು ತರಬೇತಿ ಸೊಸೈಟಿ ಕಾರ್ಯದರ್ಶಿ ಡಾ.ಮೃತ್ಯುಂಜಯ ತುರಕಾಣಿ, ತರಬೇತಿ ಪಡೆದ ನಾಗರಾಜ ಈಳಗೇರಿ ಹಾಗೂ ಮಲ್ಲಿಕಾರ್ಜುನಯ್ಯ ಮಹಾಂತಿಮಠ ಅನುಭವ ಹಂಚಿಕೊಂಡರು. ತರಬೇತಿ ಪಡೆದ ನಾಗರಿಕರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ, ಡಿ.ವೈ.ಎಸ್.ಪಿ. ಕುಮಾರಪ್ಪ, ಶಿಕ್ಷಕ ನಾಗರಾಜ ನಡುವಿನಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !