ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ ಅಪಘಾತ ಹೆಚ್ಚಳ: ಚಾಲಕರಲ್ಲಿ ತಳಮಳ

ಗಾಯಾಳು ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಕೆ: ಅವೈಜ್ಞಾನಿಕ ಹಂಪ್‌, ಹದಗೆಟ್ಟ ರಸ್ತೆಯಿಂದ ಜೀವಕ್ಕೆ ಆಪತ್ತು
Last Updated 23 ಸೆಪ್ಟೆಂಬರ್ 2021, 3:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾವು–ನೋವುಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇದರಿಂದ ಚಾಲಕ ಮತ್ತು ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಅವೈಜ್ಞಾನಿಕ ಹಂಪ್‌, ರಸ್ತೆಯಲ್ಲಿರುವ ತಗ್ಗು ಗುಂಡಿಗಳು, ಅಪೂರ್ಣ ಕಾಮಗಾರಿ, ಸಂಚಾರ ಸೂಚನಾ ಫಲಕಗಳ ಕೊರತೆಯಿಂದ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ.ಸಕಾಲದಲ್ಲಿ ದೊರೆಯದ ಆಂಬುಲೆನ್ಸ್‌ ಮತ್ತು ತುರ್ತು ಚಿಕಿತ್ಸೆಯ ಕೊರತೆಯಿಂದಾಗಿ ಸಾವು–ನೋವುಗಳು ಹೆಚ್ಚಾಗಿ ಸಂಭವಿಸುತ್ತಿವೆ.

ಹಾವೇರಿ– ಹಾನಗಲ್‌ ರಾಜ್ಯ ಹೆದ್ದಾರಿ, ತಡಸ–ಶಿಕಾರಿಪುರ ಹೆದ್ದಾರಿಯಲ್ಲಿ ಅವೈಜ್ಞಾನಿಕ ಹಂಪ್‌ಗಳು ಸುರಕ್ಷಿತ ಪ್ರಯಾಣಕ್ಕೆ ಧಕ್ಕೆಯಾಗಿವೆ. ಹಂಪ್‌ಗಳ ಮೇಲೆ ಬಣ್ಣ ಬಳಿಯದೇ ಇರುವುದು ಹಾಗೂ ರಿಫ್ಲೆಕ್ಟರ್‌ ಅಳವಡಿಸದಿರುವುದರಿಂದ ವೇಗವಾಗಿ ಸಾಗುವ ವಾಹನಗಳು, ಹಂಪ್‌ ಕಂಡ ತಕ್ಷಣ ಗಕ್ಕನೆ ಬ್ರೇಕ್‌ ಹಾಕುವ ಪರಿಣಾಮ ಅಪಘಾತ ಮತ್ತು ಅವಘಡಗಳು ಸಂಭವಿಸುತ್ತಿವೆ.

4 ವರ್ಷಗಳಲ್ಲಿ 858 ಮಂದಿ ಸಾವು

ಜಿಲ್ಲಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ 221 ಮಂದಿ, ರಾಜ್ಯ ಹೆದ್ದಾರಿಗಳಲ್ಲಿ 300 ಮಂದಿ ಹಾಗೂ ಇತರ ರಸ್ತೆಗಳಲ್ಲಿ 337 ಮಂದಿ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಗಾಯಾಳುಗಳಾಗಿದ್ದಾರೆ.

ಸಿಗದ ತುರ್ತು ಚಿಕಿತ್ಸೆ

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕರೆ ಮಾಡಿದರೆ 108 ಆಂಬುಲೆನ್ಸ್‌ಗಳು ತಕ್ಷಣ ಘಟನಾ ಸ್ಥಳಕ್ಕೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಇದಕ್ಕೆ ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಎರಡು ಆಂಬುಲೆನ್ಸ್‌ಗಳು, ಬಹುತೇಕ ಸಂದರ್ಭಗಳಲ್ಲಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ‘ರೆಫರೆನ್ಸ್‌’ ರೋಗಿಗಳನ್ನು ಸಾಗಣೆ ಮಾಡುವಲ್ಲಿ ನಿರತವಾಗಿರುತ್ತವೆ. ಬೇರೆ ತಾಲ್ಲೂಕುಗಳಿಂದ ಆಂಬುಲೆನ್ಸ್‌ಗಳು ಬರುವ ವೇಳೆಗೆ ಸಾವು–ನೋವುಗಳು ಹೆಚ್ಚಾಗುತ್ತಿವೆ.

ಕಿಮ್ಸ್‌ ಆಸ್ಪತ್ರೆಯೇ ದಿಕ್ಕು

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನರರಗೋಗ ತಜ್ಞ, ಹೃದ್ರೋಗ ತಜ್ಞರು ಸೇರಿದಂತೆ ತಜ್ಞವೈದ್ಯರ ಕೊರತೆ ಕಾಡುತ್ತಿದೆ. ಎಂಆರ್‌ಐ ಸ್ಕ್ಯಾನ್‌ ಕೂಡ ಲಭ್ಯವಿಲ್ಲ. ಹೀಗಾಗಿ ಗಂಭೀರವಾಗಿ ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ದಾರಿ ಮಧ್ಯೆಯೇ ರೋಗಿಗಳು ಮೃತಪಡುತ್ತಿದ್ದಾರೆ ಎನ್ನುತ್ತಾರೆ ಆಂಬುಲೆನ್ಸ್‌ ಚಾಲಕರು.

ಪಾಲನೆಯಾಗದ ಸುಪ್ರೀಂ ನಿರ್ದೇಶನ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಮಾರಣಾಂತಿಕ ಹಾಗೂ ಮರಣಗಳ ಸಂಖ್ಯೆಯನ್ನು ಶೇ 10ರಷ್ಟು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ನಡೆಸಿದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. 2020ರ ಜನವರಿಯಿಂದ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ, 2021ರಲ್ಲಿ ಮಾರಣಾಂತಿಕ ಅಪಘಾತಗಳ ಸಂಖ್ಯೆ ಶೇ 40.95 ಹಾಗೂ ಸಾವುಗಳ ಸಂಖ್ಯೆ ಶೇ 43ರಷ್ಟು ಹೆಚ್ಚಳವಾಗಿರುವುದನ್ನು ಪೊಲೀಸ್‌ ಇಲಾಖೆಯ ಅಂಕಿಅಂಶಗಳು ಸಾಬೀತುಪಡಿಸುತ್ತವೆ.

ಜಿಲ್ಲೆಯಲ್ಲಿರುವ 7 ಕಪ್ಪುಚುಕ್ಕೆ (ಬ್ಲ್ಯಾಕ್‌ ಸ್ಪಾಟ್‌) ಸ್ಥಳಗಳು

* ಶಿಗ್ಗಾವಿ ತಾಲ್ಲೂಕಿನ ತಿಮ್ಮಾಪುರ ಕ್ರಾಸ್‌ನಿಂದ ನೀರಲಗಿ ಕ್ರಾಸ್

* ಶಿಗ್ಗಾವಿ ಪಟ್ಟಣದ ರಂಭಾಪುರಿ ಕಾಲೇಜಿನಿಂದ ಗಂಗಿಭಾವಿ ಕ್ರಾಸ್‌

* ಶಿಗ್ಗಾವಿ ಪಟ್ಟಣದ ನಿರೀಕ್ಷಣಾ ಮಂದಿರದಿಂದ ಕುರ್ಸಾಪುರ ಕ್ರಾಸ್‌

* ಬ್ಯಾಡಗಿ ತಾಲ್ಲೂಕಿನ ಛತ್ರ ಗ್ರಾಮ

* ರಾಣೆಬೆನ್ನೂರು ನಗರದಹಲಗೇರಿ ಕ್ರಾಸ್‌/ ಕೆಳ ಸೇತುವೆ

* ರಾಣೆಬೆನ್ನೂರು ತಾಲ್ಲೂಕಿನ ಹಳೆಯ ಕರೂರು ರಸ್ತೆ

* ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಕ್ರಾಸ್‌

****

‘ವೈಜ್ಞಾನಿಕ ಹಂಪ್‌, ಸೂಚನಾ ಫಲಕ ಅಳವಡಿಕೆಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಚಾಲಕರು ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು’
- ವಸೀಂಬಾಬಾ ಮುದ್ದೇಬಿಹಾಳ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ

ಮಾರಣಾಂತಿಕ ಅಪಘಾತಗಳ ವಿವರ

ವರ್ಷ;ಅಪಘಾತಗಳ ಸಂಖ್ಯೆ; ಒಟ್ಟು ಸಾವು

2018;252;270

2019;195;214

2020;200;216

2021*;148;158

(*2021– ಆಗಸ್ಟ್‌ 31ರವರೆಗೆ)

ಮಾರಕವಲ್ಲದ ಅಪಘಾತಗಳ ವಿವರ

ವರ್ಷ;ಅಪಘಾತಗಳ ಸಂಖ್ಯೆ;ಗಾಯಾಳುಗಳು

2018;551;1481

2019;544;1189

2020;460;1048

2021*;371;898

(2021*– ಆಗಸ್ಟ್‌ 31ರವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT