ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಸಂಘದಿಂದ ರಸ್ತೆ ತಡೆ; ಆಕ್ರೋಶ

ರೈತ ವಿರೋಧಿ ಮಸೂದೆಗಳ ಜಾರಿಗೆ ವಿರೋಧ: ಬಂಡವಾಳಶಾಹಿಗಳಿಗೆ ಮಣೆ–ಆರೋಪ
Last Updated 25 ಸೆಪ್ಟೆಂಬರ್ 2020, 16:40 IST
ಅಕ್ಷರ ಗಾತ್ರ

ಹಾವೇರಿ: ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಮತ್ತು ಅನ್ನದಾತರ ಹಿತ ರಕ್ಷಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಆಗ್ರಹಿಸಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ‘ರಸ್ತೆ ತಡೆ’ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ,ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್‌ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಮೂಲಕ ಸರ್ಕಾರ ಅನ್ನದಾತರ ಬದುಕನ್ನು ಬೀದಿಗೆ ತಳ್ಳಿದೆ.ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಡ ರೈತರು ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಐದು ಮಂದಿ ಕುಟುಂಬದ ಸದಸ್ಯರು ದೇಶದ ಯಾವುದೇ ಭಾಗದಲ್ಲಿ 437 ಎಕರೆ ಜಮೀನು ಖರೀದಿಸಬಹುದು ಎಂಬ ಅಂಶ ಮಸೂದೆಯಲ್ಲಿದೆ. ಇದು ಕಾರ್ಪೊರೆಟ್‌ ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ವರದಾನವಾಗುತ್ತದೆ. ಹಾಗಾಗಿ ರೈತರಿಗೆ ಮಾರಕವಾಗುವ ಈ ಮೂರು ವಿಧೇಯಕಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಬಾರದು’ ಎಂದು ಒತ್ತಾಯಿಸಿದರು.

ವಿದ್ಯುತ್‌ ವಲಯ ಖಾಸಗೀಕರಣದಿಂದ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕಿ, ಬಿಲ್‌ ವಸೂಲಿ ಮಾಡುವ ಹುನ್ನಾರವಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗಿ, ಖಾಸಗಿಯವರ ಒಡೆತನದಲ್ಲಿ ಸಿಲುಕುತ್ತಾರೆ. ದೇಶದ ಜನರಿಗೆ ಅನ್ನ ನೀಡುವ ರೈತ ಬೀದಿಗೆ ಬೀಳಲಿದ್ದಾನೆ. ಪ್ರಗತಿಪರ ಚಿಂತಕರು, ರೈತ ಮುಖಂಡರು, ಬುದ್ಧಿಜೀವಿಗಳ ಜತೆ ಚರ್ಚಿಸಿ ಮಸೂದೆಯನ್ನು ಜಾರಿಗೆ ತರದೆ, ತರಾತುರಿಯಲ್ಲಿ ಕೇಂದ್ರ ಜಾರಿಗೊಳಿಸಲು ಹೊರಟಿದೆ ಎಂದು ಟೀಕಿಸಿದರು.

ಅತಿವೃಷ್ಟಿ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪೂರ್ಣ ಪ್ರಮಾಣದ ಬೆಳೆ ಪರಿಹಾರ ಕೊಟ್ಟಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ಅನ್ಯಾಯ ಎಸಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಮೆಕ್ಕೆಜೋಳ ಬೆಳೆದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಕೂಡಲೇ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಸಂಚಾಲಕ ಮಹಮದ್‌ ಗೌಸ್‌ ಪಾಟೀಲ್‌, ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮುಖಂಡರಾದ ರುದ್ರಗೌಡ ಕಾಡನಗೌಡ್ರ, ಮರಿಗೌಡ ಪಾಟೀಲ, ಮಂಜುಳಾ ಎಸ್‌. ಅಕ್ಕಿ, ಶಿವಬಸಪ್ಪ ಗೋವಿ ಮತ್ತು ನೂರಾರು ರೈತರು, ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT