ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದಲೇ ರಸ್ತೆ ದುರಸ್ತಿ ಕಾರ್ಯ

ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಸಿಗದ ಪ್ರಯೋಜನ: ಜಮೀನು ಸಂಪರ್ಕಿಸುವ ರಸ್ತೆಗೆ ಕಾಯಕಲ್ಪ
Last Updated 21 ಸೆಪ್ಟೆಂಬರ್ 2021, 16:23 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಪ್ರಯೋಜನ ಸಿಗದ ಕಾರಣ, ಹಾಳಾಗಿದ್ದ ಜಮೀನು ಸಂಪರ್ಕಿಸುವ 1.5 ಕಿ.ಮೀ. ರಸ್ತೆಯನ್ನು ರೈತರೇ ಸ್ವಂತ ಹಣದಿಂದ ದುರಸ್ತಿ ಮಾಡಿಸಲು ಮುಂದಾಗಿದ್ದಾರೆ.

ಹಾವೇರಿ ನಗರದ ಹಳೇ ಪಿ.ಬಿ. ರಸ್ತೆಯಿಂದ (ಜಿ.ಎಚ್‌. ಕಾಲೇಜು ಪಕ್ಕ) ರಾಷ್ಟ್ರೀಯ ಹೆದ್ದಾರಿ–48 ಸಂಪರ್ಕಿಸುವ ರಸ್ತೆಯಲ್ಲಿ ಗಿಡಗಂಟಿ ಬೆಳೆದು, ತಗ್ಗು ಗುಂಡಿಗಳು ಉಂಟಾಗಿ ರಸ್ತೆಯ ಸ್ವರೂಪವನ್ನೇ ಕಳೆದುಕೊಂಡು, ಹಳ್ಳದಂತೆ ಕಾಣುತ್ತಿತ್ತು. ಮಳೆಗಾಲದಲ್ಲಿ ಬೈಕ್‌ ಮತ್ತು ಸೈಕಲ್‌ ಸಂಚಾರ ಕೂಡ ಸವಾಲಾಗಿತ್ತು.

3 ವರ್ಷಗಳಿಂದ ಮನವಿ ಕೊಟ್ಟರೂ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಂದ ಭರವಸೆ ಹೊರತಾಗಿ ಯಾವ ಪ್ರಯೋಜನವೂ ಸಿಗಲಿಲ್ಲ. ಹೀಗಾಗಿ ಏಳೆಂಟು ರೈತರು ₹10 ಸಾವಿರದಿಂದ ₹30 ಸಾವಿರದವರೆಗೆ ಸ್ವಂತ ಹಣ ಹಾಕಿ, ಎರಡು ದಿನಗಳಿಂದ ರಸ್ತೆ ದುರಸ್ತಿ ಮಾಡಿಸುತ್ತಿದ್ದಾರೆ.

ಗುತ್ತಿಗೆದಾರ ನೆರವು:‘ಸಂಪೂರ್ಣ ಹಾಳಾಗಿರುವ ಈ ರಸ್ತೆ ದುರಸ್ತಿಗೆ ಅಂದಾಜು ₹2 ಲಕ್ಷ ವೆಚ್ಚವಾಗುತ್ತದೆ. ಇಷ್ಟು ಹಣವನ್ನು ಭರಿಸುವುದು ರೈತರಿಂದ ಕಷ್ಟಸಾಧ್ಯವಾಗಿದೆ. ಸಣ್ಣ ಹಿಡುವಳಿದಾರರು ಹಣ ಹಾಕುವಷ್ಟು ಶಕ್ತರಾಗಿಲ್ಲ. ನಮ್ಮ ಕಷ್ಟಕ್ಕೆ ಸ್ಪಂದಿಸಿದ ಗುತ್ತಿಗೆದಾರ ಸುಧಾಕರ ರಾಯ್ಕರ್‌ ಅವರು, ಜೆಸಿಬಿ, ಟಿಪ್ಪರ್‌ ವಾಹನಗಳನ್ನು ಉಚಿತವಾಗಿ ಕಳುಹಿಸಿ, ರಸ್ತೆ ದುರಸ್ತಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ’ ಎಂದು ರೈತ ಗುರುಪಾದಪ್ಪ ಕಲಕೋಟಿ ತಿಳಿಸಿದರು.

ಅಂಡರ್‌ಪಾಸ್‌ ನನೆಗುದಿಗೆ:ಈ ಕಚ್ಚಾ ರಸ್ತೆಯನ್ನು ನೋಡಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ‘ಇಲ್ಲಿ ರಸ್ತೆಯೇ ಇಲ್ಲ. ಇದೊಂದು ಹಳ್ಳ’ ಎಂಬ ಸಬೂಬು ಹೇಳಿ, ಅಂಡರ್‌ಪಾಸ್‌ ನಿರ್ಮಾಣ ಮಾಡಿಕೊಡಲಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಆಚೆಗಿನ ಜಮೀನುಗಳಿಗೆ ಹೋಗಲು 4 ಕಿ.ಮೀ. ಬಳಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮೊದಲು ಈ ಹಳ್ಳದಂಥ ರಸ್ತೆಯನ್ನು ದುರಸ್ತಿ ಮಾಡಿಸಿ, ಅಂಡರ್‌ಪಾಸ್‌ ನಿರ್ಮಾಣ ಮಾಡಿಕೊಡಲು ಒತ್ತಾಯ ಹೇರುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ರೈತ ಗಿರೀಶ ಜೋಗೂರ.

ಚಕ್ಕಡಿ ಕೂಡ ಚಲಿಸುವುದಿಲ್ಲ!

‘ಈ ರಸ್ತೆಯ ಇಕ್ಕೆಲಗಳಲ್ಲಿ ಬರುವ ಸುಮಾರು 250 ಎಕರೆ ಕೃಷಿ ಜಮೀನು 70 ರೈತರಿಗೆ ಸೇರಿದ್ದಾಗಿದೆ. ಇವರೆಲ್ಲರೂ ಕೃಷಿ ಚಟುವಟಕೆಗೆ ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಚಕ್ಕಡಿ ಕೂಡ ಇಲ್ಲಿ ಚಲಿಸುವುದಿಲ್ಲ. ಹೀಗಾಗಿ ಹೊಲಗಳಿಗೆ ಗೊಬ್ಬರ, ಬಿತ್ತನೆ ಬೀಜವನ್ನುತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಕಟಾವು ಮಾಡಿದ ನಂತರ ಫಸಲನ್ನು ತರುವುದೇ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ಮಣ್ಣು ಸುರಿಸಿ, ರಸ್ತೆಯನ್ನು ಸಮತಟ್ಟು ಮಾಡುವ ಕಾರ್ಯ ಕೈಗೊಂಡಿದ್ದೇವೆ’ ಎಂದು ನಾಗಪ್ಪ ಬೂದಿಹಾಳ, ಮಡಿವಾಳಯ್ಯ ಚೌತಿಮಠ ತಿಳಿಸಿದರು.

ನಗರಸಭೆ ವ್ಯಾಪ್ತಿಗೆ ಬರುವ ಈ ರಸ್ತೆಯನ್ನು ದುರಸ್ತಿ ಮಾಡಲು ಸೂಚನೆ ನೀಡಿದ್ದೆ. ಈ ಬಗ್ಗೆ ವಿಚಾರಿಸಿ, ಕ್ರಮ ತೆಗೆದುಕೊಳ್ಳುತ್ತೇನೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ರಸ್ತೆಯನ್ನು ಸರ್ವೆ ಮಾಡಿಸಿ, ನಗರಸಭೆ ವತಿಯಿಂದ ₹10 ಲಕ್ಷ ಅನುದಾನದಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ
– ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT