ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಾರಾಂ ಹೊಡೆದಾಗ ಕೋಪ ಬರುತ್ತಾ..?

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಚಿವ ಸುರೇಶ್‌ಕುಮಾರ್‌ ಪ್ರಶ್ನೆ
Last Updated 23 ಡಿಸೆಂಬರ್ 2019, 14:04 IST
ಅಕ್ಷರ ಗಾತ್ರ

ಹಾವೇರಿ: ಬೆಳಗಿನ ಜಾವ ಎದ್ದು ಓದೋರು ಎಷ್ಟು ಮಂದಿ?, ಅಲಾರಾಂ ಹೊಡೆದಾಗ ಕೋಪ ಬರುತ್ತಾ?, ಶಿಕ್ಷಕರು ಮಿಸ್ಡ್‌ ಕಾಲ್‌ ಕೊಟ್ಟು ಎದ್ದೇಳಿಸುತ್ತಾರಾ? ಪರೀಕ್ಷೆ ಅಂದ್ರೆ ಭಯ ಅನ್ನೋರು ಕೈ ಎತ್ರಿ....

ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಕೇಳುವ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಯಾವ ರೀತಿ ಅಧ್ಯಯನ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದರು.

ತಾಲ್ಲೂಕಿನ ನೆಲೋಗಲ್ಲ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿದ ಅವರು ನೇರವಾಗಿ ಎಸ್ಸೆಸ್ಸೆಲ್ಸಿ ತರಗತಿಗೆ ಹೋದರು.ವಿದ್ಯಾರ್ಥಿಯೊಬ್ಬ ತ್ರಿಭುಜಗಳ ಪ್ರಮೇಯವನ್ನು ಕಪ್ಪು ಹಲಗೆಯ ಮೇಲೆ ನಿರೂಪಿಸುತ್ತಿದ್ದುದನ್ನು ಸಚಿವರು ಮಕ್ಕಳೊಂದಿಗೆ ಕೂತು ಆಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಪರೀಕ್ಷೆಗೆ ತಯಾರಿದ್ದೀರಾ?" ಎಂದು ವಿದ್ಯಾರ್ಥಿಗಳಿನ್ನು ಪ್ರಶ್ನಿಸಿದರು. ಮಕ್ಕಳು ಆತ್ಮವಿಶ್ವಾಸದಿಂದ ‘ಸಿದ್ಧವಿದ್ದೇವೆ’ ಎಂದು ಉತ್ತರಿಸಿದರು.

‘ಬೆಂಗಳೂರಿನ ಆನೇಕಲ್ ತಾಲ್ಲೂಕು ಗ್ರಾಮದಲ್ಲಿ ಕೂಲಿ ಮಾಡಿ ತಾಯಿಯೊಬ್ಬರು ತನ್ನ ಮಗನನ್ನು ಸಾಕುತ್ತಿದ್ದರು. ತಂದೆ ತೀರಿ ಹೋಗಿದ್ದರು. ಆ ತಾಯಿಯ ಮನವೊಲಿಸಿ, ದುಡಿಮೆಗೆ ಹೋಗಬೇಕಿದ್ದ ಪುಟ್ಟ ಬಾಲಕನನ್ನು ಕೈ ಹಿಡಿದು ಶಿಕ್ಷಕಿಯೊಬ್ಬರು ಶಾಲೆಗೆ ಕರೆ ತಂದರು.ಆಂಜನಪ್ಪ ಎಸ್.ಎಸ್.ಎಲ್.ಸಿ.ಯಲ್ಲಿ ಶೇ 91, ಸಿಇಟಿಯಲ್ಲಿ 131ನೇ ರ‍್ಯಾಂಕ್‌ ಪಡೆಯುತ್ತಾನೆ. ಅಷ್ಟೇ ಅಲ್ಲ, ಜೆಇಇ (ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮ್‌)ನಲ್ಲಿ ದೇಶಕ್ಕೆ 91ನೇ ರ‍್ಯಾಂಕ್ ಪಡೆದು, ಪ್ರಸ್ತುತ ಮುಂಬೈನಲ್ಲಿ ಐಐಟಿ ಓದುತ್ತಾ ಇದ್ದಾನೆ. ಹೀಗೆ ಎಲ್ಲ ಅಡೆತಡೆಗಳನ್ನು ದಾಟಿ ನೀವೆಲ್ಲರೂ ಉತ್ತಮ ಸಾಧನೆ ಮಾಡಬೇಕು’ ಎಂದು ನೈಜ ಘಟನೆಯನ್ನು ಉದಾಹರಣೆ ನೀಡಿ, ಮಕ್ಕಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ. ಹಾಗಾಗಿ ನೀವೆಲ್ಲರೂ ಚೆನ್ನಾಗಿ ಓದುವ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಒತ್ತಡ ತಂದುಕೊಳ್ಳದೆ ಖುಷಿಯಾಗಿ ಪರೀಕ್ಷೆ ಬರೆದು ಯಶಸ್ಸು ಗಳಿಸಿ ಎಂದು ಹಾರೈಸಿದರು.

ಪೋಷಕರಿಂದ ಮಕ್ಕಳ ವ್ಯಾಸಂಗಕ್ಕೆ ಬದ್ಧವಾಗಿರುವಂತೆ ಪ್ರತಿಜ್ಞೆ ತೆಗೆದುಕೊಳ್ಳಿ, ಪ್ರತಿ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾಹಿತಿ ನೀಡಿ. ಮನೆಯಲ್ಲಿ ವಿದ್ಯುತ್ ಹಾಗೂ ಇತರೆ ಸಮಸ್ಯೆಗಳು ಇರುವವರಿಗೆ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಿ ಓದಲು ನೆರವಾಗಿ, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುವ ಪರೀಕ್ಷಾ ಕೇಂದ್ರಗಳಿಲ್ಲೇ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT