ಭಾನುವಾರ, ಡಿಸೆಂಬರ್ 8, 2019
21 °C
ಶಬರಿಮಲೆ ದೇಗುಲ ಪ್ರವೇಶ ವಿವಾದದ ಬಳಿಕ ಇಳಿಕೆಯಾಗಿದ್ದ ಭಕ್ತರ ಪ್ರಮಾಣ

ಮತ್ತೆ ಮಾಲಾಧಾರಿಗಳ ಸಂಖ್ಯೆ ಹೆಚ್ಚಳ

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಜಿಲ್ಲೆಯಿಂದ ಶಬರಿಮಲೆಗೆ ತೆರಳುವ ಭಕ್ತರ (ಮಾಲಾಧಾರಿಗಳು) ಸಂಖ್ಯೆಯು ಕಳೆದೊಂದು ವಾರದಿಂದ ಹೆಚ್ಚತೊಡಗಿದೆ.

‘ಎಲ್ಲ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನ. 13ರಂದು ಒಪ್ಪಿತ್ತು. ಆ ಬಳಿಕ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ, ಶಬರಿಮಲೆ ಪರಂಪರೆ ಸಂರಕ್ಷಣಾ ವೇದಿಕೆ ಹಾಗೂ ವಿವಿಧ ಧಾರ್ಮಿಕ ಸಂಘಟನೆಗಳು ಜಾಥಾ, ಧರ್ಮಸಭೆ, ಮಾಲಾಧಾರಿ ಗುರುಸ್ವಾಮಿಗಳ ಜೊತೆ ಸಂವಾದ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಹೀಗಾಗಿ, ಕಳೆದೊಂದು ವಾರದಲ್ಲಿ ಮಾಲಾಧಾರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ’ ಎಂದು ಸೇವಾ ಸಮಾಜಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳಂಬೀಡ ನಾರಾಯಣ ಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ 2010ರ ಬಳಿಕ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆಯು ಕ್ರಮೇಣವಾಗಿ ಏರಿಕೆ ಕಾಣತೊಡಗಿತ್ತು. ಆದರೆ, ಎಲ್ಲ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಆ ಬಳಿಕ ಅಲ್ಲಿ ಉಂಟಾದ ಗದ್ದಲಗಳ ಪರಿಣಾಮ ಜಿಲ್ಲೆಯಲ್ಲಿ ಮಾಲಾಧಾರಣೆ ಮಾಡುವವರ ಸಂಖ್ಯೆಯು ಗಣನೀಯವಾಗಿ ಇಳಿಕೆ ಕಂಡಿತು. 

ಶಬರಿಮಲೆಗೆ ಪ್ರಮುಖವಾಗಿ ಮಂಡಲ ಮತ್ತು ಮಕರಜ್ಯೋತಿಯ ದರ್ಶನಕ್ಕಾಗಿ ಭಕ್ತರು ಮಾಲಾಧಾರಿಗಳಾಗಿ ವ್ರತಾಚರಣೆಯಿಂದ ಹೋಗುತ್ತಾರೆ. ಅದಕ್ಕಾಗಿ ಕಾರ್ತೀಕದ ಆರಂಭದಲ್ಲಿ ಮಾಲೆ ಧರಿಸುತ್ತಾರೆ. ವರ್ಷಂಪ್ರತಿ ಹೋಗುವ ಬಹುತೇಕರೇ ಈ ಬಾರಿ ಕಾರ್ತೀಕದ ಆರಂಭದಲ್ಲಿ ಮಾಲೆ ಧರಿಸಿರಲಿಲ್ಲ. ಒಟ್ಟಾರೆ ಮಾಲಾಧಾರಿಗಳ ಸಂಖ್ಯೆ ಕಡಿಮೆ ಇತ್ತು. ಕಳೆದ ವಾರ ಜಿಲ್ಲೆಯ ವಿವಿಧೆಡೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಲೆ ಧರಿಸಿದ್ದಾರೆ. 

ಸುಮಾರು ಮೂರು ದಶಕಗಳ ಹಿಂದೆ ಕರಾವಳಿಯಿಂದ ಶಿವಮೊಗ್ಗದ ಆನವಟ್ಟಿ ಮೂಲಕ ಜಿಲ್ಲೆಗೆ ‘ಮಾಲಾಧಾರಣೆ’ಯ ಪರಂಪರೆಯು ಬಂದಿದೆ. ಆನವಟ್ಟಿಯ ಪ್ರಭಾಕರ ಹಾಗೂ ಅಕ್ಕಿ ಆಲೂರಿನ ಮಂಜುನಾಥ ಮಾಸ್ತಿ ಮತ್ತಿತರರು ಅಂದಿನ ಕಾಲದಿಂದಲೇ ‘ಗುರುಸ್ವಾಮಿ’ಯಾಗಿ ನೇತೃತ್ವ ವಹಿಸುತ್ತಿದ್ದರು. ಆದರೆ, ಕಠಿಣ ವ್ರತ, ಕೇರಳದ ಆಹಾರ ಪದ್ಧತಿ (ಕುಚ್ಚಲಕ್ಕಿ ಗಂಜಿ), ವಾಹನಗಳ ಕೊರತೆ, ದಟ್ಟ ಕಾಡಿನ ನಡುವಿನ ದುರ್ಗಮ ಹಾದಿ, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳ ಕಾರಣ ಜಿಲ್ಲೆಯಲ್ಲಿ ಭಕ್ತರ ಸಂಖ್ಯೆಯು ಏರುಗತಿ ಕಂಡಿರಲಿಲ್ಲ ಎಂದರು.

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ವಿವಿಧ ರಾಜ್ಯಗಳ ‘ಸಮಾಜಂ’ಗಳ ಜೊತೆ ಉತ್ತಮ ಬಾಂಧವ್ಯದ ಮೂಲಕ ಶಬರಿಮಲೆ ಮಾಲಾಧಾರಿ ಹಾಗೂ ಯಾತ್ರಾರ್ಥಿಗಳಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿತು. ಇದರಿಂದ 2010ರ ಬಳಿಕ ಜಿಲ್ಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು 40ನೇ ಬಾರಿ (22ನೇ ವರ್ಷ) ಮಾಲೆ ಧರಿಸಿರುವ ನಾರಾಯಣ ಸ್ವಾಮಿ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು