ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೀಯ’

ರೈಲ್ವೆ ಸಾಂಪ್ರದಾಯಿಕ ಸಪ್ತಾಹದ ಸಮಾರೋಪ: ಮಳ್ಳಪ್ಪ ಕೊಪ್ಪದ ಅಭಿಮತ
Last Updated 23 ಜುಲೈ 2022, 14:03 IST
ಅಕ್ಷರ ಗಾತ್ರ

ಹಾವೇರಿ: ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭವನ್ನು ಅನುಭವಿಸುತ್ತಿರುವ ನಾವು ಈ ಅಮೃತ ಘಳಿಗೆಗೆ ಪ್ರಾಣ ತ್ಯಾಗ ಮಾಡಿರುವ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮ ಸಮಯೋಚಿತ’ ಎಂದು ಸ್ವಾತಂತ್ರ್ಯ ಹೋರಾಟಗಾರ ಮಳ್ಳಪ್ಪ ಕೊಪ್ಪದ ಅಭಿಪ್ರಾಯಪಟ್ಟರು.

ನಗರದ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ಶನಿವಾರ ರೈಲ್ವೆ ಮಂಡಳಿ ಮತ್ತು ಮೈಸೂರಿನ ನೈಋತ್ಯ ರೈಲ್ವೆ ವಿಭಾಗದಿಂದ ಒಂದು ವಾರ ನಡೆದ ‘ಆಜಾದ್ ಕೀ ರೈಲ್ ಗಾಡಿ ಔರ್ ಸ್ಟೇಷನ್ಸ್’ ಸಾಂಪ್ರದಾಯಿಕ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬ್ಯಾಡಗಿ ತಾಲ್ಲೂಕಿನ ಸೂಡಂಬಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ಸಂಗೂರ ಕರಿಯಪ್ಪ ಅವರ ತಂಡದಲ್ಲಿದ್ದೆ. ಹಿರೇಅಣಜಿ ನನ್ನೂರಿಗೆ ಬರುತ್ತಿದ್ದ ಕರಿಯಪ್ಪ ಅವರೊಂದಿಗೆ ವೀಸಾಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೆ. ಆ ದಿನಗಳು ನನ್ನ ಜೀವನದ ಮರೆಯಲಾಗದ ಕ್ಷಣಗಳು ಎಂದರು.

ಹುತಾತ್ಮ ಮೈಲಾರ ಮಹಾದೇವಪ್ಪ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ ಮಾತನಾಡಿ, ದೇಶದ 75 ರೈಲು ನಿಲ್ದಾಣಗಳ ಪೈಕಿ ಹಾವೇರಿಯ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿರುವ ರೈಲ್ವೆ ಇಲಾಖೆ ಹುತಾತ್ಮನ ಬಲಿದಾನಕ್ಕೆ ಸೂಕ್ತ ಗೌರವ ನೀಡಿದೆ ಎಂದರು.

ಇದೇ ಸಂದರ್ಭದಲ್ಲಿ ಚನ್ನಮ್ಮ ಹಳ್ಳಿಕೇರಿ, ವಿ.ಎನ್. ತಿಪ್ಪನಗೌಡ್ರ, ಎಚ್.ಎಸ್. ಮಹಾದೇವಪ್ಪ, ಎಚ್.ಎಸ್. ನರೇಂದ್ರ, ಜಗದೀಶ ಮಹಾರಾಜಪೇಟೆ, ಚಿಕ್ಕಮ್ಮ ಆಡೂರ, ಗೂಳಪ್ಪ ಅರಳಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ರೈಲ್ವೆ ಇಲಾಖೆಯ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಈ ವಿಜಯಾ, ಸಿನಿಯರ್ ಡಿವಿಜನಲ್ ಪರ್ಸನಲ್ ಆಫೀಸರ್ ಪ್ರಶಾಂತ ಮಾಸ್ತಿಹೊಳಿ, ಸೀನಿಯರ್ ಡಿಎಸ್‍ಟಿಇ ಜೆ.ಚಂದ್ರಶೇಖರ, ಡಿಎಸ್‍ಟಿಇ ಲೋಕೇಶ್ವರಪ್ಪ, ಎಡಿಇಎನ್ ಪ್ರಶಾಂತಕುಮಾರ ಇದ್ದರು.

ಜುಲೈ 18ರಿಂದ ಆರಂಭವಾಗಿದ್ದ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ಆರು ಗಂಟೆಗೆ ದೇಶಭಕ್ತಿ ಸಾರುವ ಹಾಡುಗಳು, ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಸಾಕ್ಷ್ಯಚಿತ್ರ ಪ್ರದರ್ಶನ, ಶೇಷಗಿರಿ ಕಲಾ ತಂಡದ ಕಲಾವಿದರಿಂದ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡ್ರ ಜೀವನಾಧಾರಿತ ಮನೆಗೆ ಮರಳದವರು ನಾಟಕ ಪ್ರದರ್ಶನ, ಶಾಲಾ ಮಕ್ಕಳಿಂದ ರೂಪಕಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT