ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿ ಮತ್ತು ಮಾನವೀಯತೆ ಬದುಕಾಗಲಿ

ಮಕ್ಕಳ ಜೊತೆ ಮಕ್ಕಳಾಗಿ ಸಂವಾದ ನಡೆಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ
Last Updated 5 ಜನವರಿ 2019, 20:25 IST
ಅಕ್ಷರ ಗಾತ್ರ

ಕುಮಾರಪಟ್ಟಣ (ಹಾವೇರಿ ಜಿಲ್ಲೆ): ಅಲ್ಲಿ, ಭ್ರಷ್ಟಾಚಾರ, ಅಸಮಾನತೆ, ಶೋಷಣೆ ಕುರಿತ ಪ್ರಶ್ನೆಗಳು ಕೇಳಿಬಂದವು. ನಿರ್ಮೂಲನೆಗಾಗಿ ನಾವು ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು? ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಉತ್ತರಿಸಿದರು. ಅವರ ಮಾತಿಗೆ ಶಿಕ್ಷಕರು–ಮಕ್ಕಳು ಚಪ್ಪಾಳೆ ತಟ್ಟಿದರು, ಶ್ಲಾಘಿಸಿದರು, ಗಂಭೀರವಾಗಿ ಆಲಿಸಿದರು. ಅವರೂ ಭಾವುಕರಾದರು. ಕಾರ್ಯಕ್ರಮವು ‘ಭ್ರಷ್ಟಾಚಾರ ವಿರೋಧಿ ಬೀಜದ ನಾಟಿ’ಯಂತಿತ್ತು.

ಇಲ್ಲಿನ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ ಹಾಗೂ ಗ್ರಾಸಿಂ ಸಿರಿಗನ್ನಡ ವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ಚಿತ್ರಣ. ಮಕ್ಕಳ ಜೊತೆಗಿನ ಪ್ರಶ್ನೋತ್ತರವು ಹೀಗಿತ್ತು.

*ಭ್ರಷ್ಟಾಚಾರ ತಡೆಯಲು ಏನು ಬೇಕು?
ತೃಪ್ತಿ ಮತ್ತು ಮಾನವೀಯತೆಯಿಂದ ಬದುಕಬೇಕು. ಭ್ರಷ್ಟಾಚಾರವು ಪುರಾಣದಲೇ ಇದೆ. ಅದನ್ನು ನಿರ್ನಾಮ ಮಾಡುವುದು ಕಷ್ಟ. ಆದರೆ, ನಿಯಂತ್ರಣವು ಪ್ರತಿಯೊಬ್ಬರಿಂದ ಸಾಧ್ಯ. ದುರಾಸೆ ಬಿಟ್ಟು ಮಾನವರಾಗಬೇಕು.

*ಭ್ರಷ್ಟಾಚಾರ ನಿಯಂತ್ರಣದಲ್ಲಿ ಶಿಕ್ಷಕರ ಪಾತ್ರವೇನು?
ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಬುದ್ಧಿವಂತರು, ಶ್ರೀಮಂತರು, ವೈದ್ಯರು, ಎಂಜಿನಿಯರ್, ರ್‍ಯಾಂಕ್‌ ಸ್ಟೂಡೆಂಟ್‌ ಮಾಡುವ ಮೊದಲು, ಮನುಷ್ಯರನ್ನಾಗಿಸಬೇಕು. ಮಾಹಿತಿ ಮತ್ತು ಜ್ಞಾನವು ದುರಾಸೆಯ ಬದಲಾಗಿ ಮಾನವೀಯತೆ ಕಲಿಸಬೇಕು.

*ರಾಜಕಾರಣಿಗಳು ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದಿಲ್ಲ ಯಾಕೆ?
ಹಿಂದೆ ರಾಜಕೀಯವು ‘ಸೇವೆ’ಯಾಗಿತ್ತು. ಇಂದು ‘ವೃತ್ತಿ’ಯಾಗಿದೆ. ಅವರಿಗೆ ಸಂಬಳ, ಭತ್ಯೆಗಳು, ಪಿಂಚಣಿ ಮಾತ್ರವಲ್ಲ, ಸದನಕ್ಕೆ ಕುಳಿತದಕ್ಕೆ ‘ಸಿಟ್ಟಿಂಗ್ ಫೀ’ ಇದೆ. ಇದು ಯಾವ ಪುರುಷಾರ್ಥಕ್ಕೆ? ಮತದಾರರೂ ಪಕ್ಷ ಮತ್ತು ಅದರ ಮುಖಂಡನ ಬದಲಾಗಿ, ತಮ್ಮ ಕ್ಷೇತ್ರದಲ್ಲಿ ನಿಂತ ಅಭ್ಯರ್ಥಿಯ ಅರ್ಹತೆ ನೋಡಿ ಮತಹಾಕಬೇಕು.

*ಲೋಕಪಾಲ ಮಸೂದೆ ಕುರಿತ ಹೋರಾಟದ ಬಗ್ಗೆ ಏನು ಹೇಳುತ್ತೀರಿ?
ಅದು ತಾರ್ಕಿಕ ಅಂತ್ಯ ಕಾಣಲಿಲ್ಲ. 2013ರಲ್ಲಿ ಕಿವಿ, ಕಣ್ಣು, ಕೈಗಳಿಲ್ಲದ ಮಸೂದೆ ಜಾರಿಗೆ ಬಂತು. ಆ ಬಳಿಕ 2013ರಿಂದ 18ರ ತನಕ ಅದು ಜೀವಂತವೇ ಇಲ್ಲದಂತೆ ಮಾಡಿದರು. ಲೋಕಾಪಾಲ ಮತ್ತು ಲೋಕಾಯುಕ್ತವನ್ನು ಹಿಸುಕಿ ಹಾಕಿದವರೇ ಚುನಾವಣೆಯಲ್ಲಿ ‘ಬಲಿಷ್ಠ’ ಮಾಡುವುದಾಗಿ ಭರವಸೆ ನೀಡುವುದೇ ವ್ಯಂಗ್ಯವಾಗಿದೆ.

*ಶಿಕ್ಷಣದಲ್ಲಿ ಲೋಪದೋಷವಿದೆಯೇ?
ಪ್ರಾಮಾಣಿಕತೆ ಹಾಗೂ ಸಮಾನತೆಯನ್ನು ಪಾಲಿಸುವುದು ಬಹಳ ಕಷ್ಟ. ‘ಹುಚ್ಚ, ತಿನ್ನವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ’ ಎಂದು ಲೇವಡಿ ಮಾಡುತ್ತಾರೆ. ಅದಕ್ಕಾಗಿ ಶಿಕ್ಷಣವು ಬುದ್ಧಿವಂತ, ಶ್ರಿಮಂತ, ಜ್ಞಾನವಂತನಿಗಿಂತ ಮೊದಲು ಮಾನವನಾಗುವುದನ್ನು ಕಲಿಸಬೇಕಾಗಿದೆ.

*ಪ್ರಾಮಾಣಿಕರೆಲ್ಲ ಕೆಲಸ ಸಿಕ್ಕಿದ ಬಳಿಕ ಭ್ರಷ್ಟರಾಗುತ್ತಾರಲ್ಲಾ?
ಅಧಿಕಾರ ಮತ್ತು ಹಣವು ಎಲ್ಲರನ್ನೂ ಬದಲಾಯಿಸುತ್ತದೆ. ಅಧಿಕಾರವಿದ್ದರೂ ಬದಲಾಗದವನೇ ಮನುಷ್ಯ. ನನಗೆ ಪ್ರಶಸ್ತಿಯಾಗಿ ಬಂದ ₹ 1 ಕೋಟಿಯನ್ನು ಸೇನೆಗೆ ನೀಡಿದೆ. ಹೆಮ್ಮೆಯಿಂದ ಬಹುಕುತ್ತಿದ್ದೇನೆ. ದುರಾಸೆಯನ್ನು ಬಿಟ್ಟರೆ, ನನ್ನಂತೆಯೇ ಎಲ್ಲರೂ ನೆಮ್ಮದಿಯಿಂದ ಇರಬಹುದು.

*ನಿಮಗೆ ಅನುಭವ ಇಲ್ಲ ಎಂದು ಮಕ್ಕಳಿಗೆ ಬೈಯುತ್ತಾರಲ್ಲಾ?

ಶಿಕ್ಷಣ ಎಂಬುದು ಪ್ರತಿನಿತ್ಯದ ಕಲಿಕೆ. ಅದಕ್ಕೆ ಕೊನೆ ಎಂಬುದಿಲ್ಲ. ಅದು ಓದು–ಬರಹ ಹಾಗೂ ಅನುಭವದ ಮೂಲಕವೂ ಬರುತ್ತದೆ. ಯಾವುದೇ ವೇದಿಕೆಯಲ್ಲಿ ಜ್ಞಾನೋದಯ ಆಗುವುದಿಲ್ಲ.

*ಹೋರಾಟದಿಂದ ಬದಲಾವಣೆಗಳು ಬಂದಿವೆಯಾ?
ನಿವೃತ್ತ ನ್ಯಾಯಮೂರ್ತಿಯಾಗಿ ನೆಲದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತೀರಲ್ಲಾ? ಎಂದು ನ್ಯಾಯಮೂರ್ತಿಗಳೇ ನನಗೆ ಕರೆ ಮಾಡಿ ಪ್ರಶ್ನಿಸಿದ್ದರು. ಅದರೆ, ಬದಲಾವಣೆಗಾಗಿ ನಾವು ಜನರಲ್ಲಿ ಒಂದಾಗಬೇಕಿದೆ. ಆ ಹೋರಾಟ ಮುಂದುವರಿಯಬೇಕಿತ್ತು. ದೇಶದಲ್ಲಿ ಜಯಪ್ರಕಾಶ್ ನಾರಾಯಣ ಮತ್ತು ಅಣ್ಣಾ ಹಜಾರೆ ಸಂಚಲನ ಮೂಡಿಸಿದ್ದರು. ಆದರೆ, ಸಮಾಜವೇ ಶ್ರೀಮಂತ್ರಿಕೆಯನ್ನು ಪೂಜಿಸುವಾಗ ಕಷ್ಟಗಳು ಎದುರಾಗುವುದು ಸಹಜ

*ವಿದ್ಯಾವಂತರೇ ಭಯೋತ್ಪಾದಕರಾಗುತ್ತಾರಲ್ಲಾ?
ಶ್ರೀಮಂತ, ಬುದ್ಧಿವಂತ, ಅತಿ ಹೆಚ್ಚು ಅಂಕದ ಬದಲಾಗಿ ಪಠ್ಯದಲ್ಲಿ ತೃಪ್ತಿ, ಮಾನವೀಯತೆಯನ್ನು ಕಲಿಸುತ್ತಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಮಕ್ಕಳಲ್ಲಿ ಮೌಲ್ಯಗಳನ್ನು ಕುಟುಂಬವೇ ತುಂಬಬೇಕು.

*ನಿಷ್ಠಾವಂತರಿಗೆ ಕಾನೂನು ಸಹಕಾರಿಯಾಗಿಲ್ಲವೇ?
ಎಲ್ಲರಿಗೂ ಕಾನೂನು ಒಂದೇ. ಆದರೆ, ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕಾದರೆ, ಸಮಾಜ ಬದಲಾಗಬೇಕು. ಆರೋಗ್ಯ ಮತ್ತು ವಿದ್ಯೆ ಸರ್ಕಾರದ ಜವಾಬ್ದಾರಿ ಆಗಬೇಕು. ಆದರೆ, ಸರ್ಕಾರ ಎರಡನ್ನೂ ಕೈ ಚೆಲ್ಲಿದ್ದು, ಖಾಸಗಿಯವರು ಸರ್ಕಾರದ ಲೋಪದೋಷಗಳ ಲಾಭ ಮಾಡಲು ಹೊರಟಿದ್ದಾರೆ. ಜನತೆ ಸಮಸ್ಯೆಗೆ ಸಿಲುಕಿದ್ದಾರೆ.ಹಿಂದೆ ಶ್ರೀಮಂತರು ‘ಸಾಕ್ಷಿ’ಗಳನ್ನು ಖರೀದಿಸುತ್ತಿದ್ದರೆ, ಇಂದು ವಕೀಲರು ಮತ್ತು ಜಡ್ಜ್‌ಗಳನ್ನೇ ಖರೀದಿಸಿದ ನಿದರ್ಶನಗಳಿವೆ.

*ಭಾರತೀಯ ಸೇನೆ ಸೇರ್ಪಡೆ ಬಗ್ಗೆ?
ಪ್ರತಿ ವ್ಯಕ್ತಿಗೂ 2 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಕಡ್ಡಾಯ ಮಾಡಬೇಕು. ಅದು, ಬದುಕಿನಲ್ಲಿ ಶಿಸ್ತು ಕಲಿಸುತ್ತದೆ.

* ಜಾತಿ ಆಧಾರಿತ ಮೀಸಲಾತಿ ಬೇಕಾ?
ಸ್ವಾತಂತ್ರ್ಯ ಬಂದ 10 ವರ್ಷಗಳ ಕಾಲ ಮಾತ್ರ ಮೀಸಲಾತಿ ಸಾಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಅದು 1960ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ, ಒಮ್ಮೆ ಮೀಸಲಾತಿ ಪಡೆದ ಜಡ್ಜ್‌, ಐಎಎಸ್, ಐಪಿಎಸ್, ಅಧಿಕಾರಿಗಳು, ಉದ್ಯಮಿಗಳೇ ಮತ್ತೆ ಮತ್ತೆ ಮೀಸಲಾತಿ ಪಡೆದುಕೊಂಡು, ಅರ್ಹ ಶೋಷಿತರನ್ನು ವಂಚಿಸುತ್ತಿದ್ದಾರೆ. ಮೀಸಲಾತಿ ಬೇಕು. ಆದರೆ, ಒಂದು ಕುಂಟುಬಕ್ಕೆ ಒಂದೇ ಬಾರಿ ಸಿಗಬೇಕು ಎಂಬ ಕಾಯಿದೆ ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT