ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ: ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
Last Updated 28 ಜೂನ್ 2021, 11:28 IST
ಅಕ್ಷರ ಗಾತ್ರ

ಹಾವೇರಿ: ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂ.ಎಸ್‌.ಪಿ)ಯನ್ನು ಕಾನೂನು ಚೌಕಟ್ಟಿನಲ್ಲಿ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ತಹಶೀಲ್ದಾರ್‌ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

‘ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ’ ಎಂಬ ಘೋಷವಾಕ್ಯವನ್ನು ಮೊಳಗಿಸಿದ ರೈತರು, ಪ್ರತಿಭಟನೆಯ ನಂತರ ತಹಶೀಲ್ದಾರ್‌ ಗಿರೀಶ ಸ್ವಾದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ದೆಹಲಿಯಲ್ಲಿ ಏಳು ತಿಂಗಳಿಂದ ರೈತರು ನಿರಂತರವಾಗಿ ಚಳವಳಿ ನಡೆಸುತ್ತಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ 47 ವರ್ಷ ಕಳೆದರೂ, ಇಂದಿಗೂ ‘ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸುವ’ ಸವಾಲು ಎದುರಾಗಿದೆ. ಹೀಗಾಗಿ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ರೈತರ ಚಳವಳಿ ಹತ್ತಿಕ್ಕಲು ಕೇಂದ್ರ ಸರ್ಕಾರ ರಸ್ತೆಗಳಲ್ಲಿ ಕಂದಕಗಳನ್ನು ಅಗೆದು, ಹೆದ್ದಾರಿಗಳಲ್ಲಿ ಕಬ್ಬಿಣದ ಮುಳ್ಳುಗಳನ್ನು ಹಾಕಿತು. ರೈತರ ಮೇಲೆ ಅಶ್ರುವಾಯು ಸಿಡಿಸುವುದು, ಜಲಫಿರಂಗಿ ಹಾರಿಸುವುದು ಹಾಗೂ ಸುಳ್ಳು ಪ್ರಕರಣಗಳನ್ನು ಹಾಕಿ ಬಂಧಿಸುವುದು ಮುಂತಾದ ರೀತಿಯಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ರೈತರ ಮನ್ ಕೀ ಬಾತ್‌ ಅನ್ನು ಕೇಂದ್ರ ಎಂದಿಗೂ ಕೇಳಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಶಂಕ್ರಣ್ಣ ಅರಗಂಜಿ, ಶಿವನಗೌಡ ಕರೇಗೌಡ್ರ, ಜಾನ್‌ ಪುನೀತ್‌, ಮೆಹಬೂಬ್‌ ಸಾಬ್‌ ಮುಲ್ಲಾ, ಚಂದ್ರಶೇಖರ ಜಾವಗಲ್‌, ದಿಳ್ಳೆಪ್ಪ ಮಣ್ಣೂರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT