ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನಾಡಹಬ್ಬದ ನೆಲೆಗಟ್ಟು ಉಳಿಸಿ–ಬೆಳೆಸಿ

Last Updated 27 ಅಕ್ಟೋಬರ್ 2020, 12:51 IST
ಅಕ್ಷರ ಗಾತ್ರ

ಹಾವೇರಿ: ‘ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾವಿನ್ಯತೆಯ ಸ್ಪರ್ಶ ನೀಡಿ ಕನ್ನಡ ನಾಡು– ನುಡಿಯ ಹಿರಿಮೆಯನ್ನು ಹೆಚ್ಚಿಸಬೇಕಾಗಿದೆ. ನಾಡಿನ ಭವ್ಯ ಸಂಸ್ಕೃತಿ, ಸಂಸ್ಕಾರಗಳ ಅಭಿವ್ಯಕ್ತಿಯ ಆಶಯಗಳೇ ನಾಡಹಬ್ಬವಾಗಿದ್ದು, ಅದರ ಮೂಲ ನೆಲೆಗಟ್ಟನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 23ನೇ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆರು ತಿಂಗಳಿನಿಂದ ನಮ್ಮ ಬದುಕು ಕೊರೊನಾ ಸುತ್ತ ಗಿರಕಿ ಹೊಡೆಯುತ್ತಿದ್ದು, ಚಲನಶೀಲತೆಯನ್ನು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ನಾವು ಹೊಸ ಓದು, ಅಧ್ಯಯನ ಮಾಡಿದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿ, ಮುಂಬರುವ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ‘ಕನ್ನಡ ನಾಡು–ನುಡಿ ರಕ್ಷಣೆಗೆ ನಾವು ದೀಕ್ಷೆ ಪಡೆಯಬೇಕು. ಅದರೊಂದಿಗೆ ಅನುಸಂಧಾನ ಆಗಬೇಕು. ಏಕೆಂದರೆ ಭಾಷೆಯ ಬಿಕ್ಕಟ್ಟು ಬದುಕಿನ ಬಿಕ್ಕಟ್ಟಾಗುತ್ತದೆ’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ‘ನೂತನ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತಿದ್ದು, ಎಲ್ಲಾ ಶಾಲೆಗಳಲ್ಲಿ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ದೊರೆಯುವಂತೆ ಮಾಡಬೇಕು. ಯಾವುದೇ ಲಾಬಿಗೆ ಮಣಿಯಬಾರದು’ ಎಂದು ಹೇಳಿದರು.

ತಾಲೂಕಾ ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನೀಟ್ ಪರೀಕ್ಷೆಯಲ್ಲಿ 1811ನೇ ರ‍್ಯಾಂಕ್‌ ಪಡೆದ ಹಾವೇರಿಯ ಲಕ್ಷ್ಮೀ ಶಿವಸಾಲಿ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ಲ, ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಸ್.ಜಿ. ಸುಣಗಾರ, ತಾಲ್ಲೂಕು ಕಸಾಪ ಕೋಶಾಧಕ್ಷ ಸಿ.ಜಿ.ತೋಟಣ್ಣನವರ, ಎಂ.ಎ ಯಣ್ಣಿ, ಹಿರಿಯ ಸಾಹಿತಿ ಗಂಗಾಧರ ನಂದಿ, ವಿ.ಪಿ ದ್ಯಾಮಣ್ಣನವರ, ಶಂಕರ ಸುತಾರ ಇದ್ದರು.ಸಮತಾ ಕಲಾ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ತಾಲ್ಲೂಕು ಕಸಾಪ ಕಾರ್ಯದರ್ಶಿ ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ಹಾಗೂ ನಾಗರಾಜ ದೇಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT